ಮೈಸೂರು: ನಾನೇ 5 ವರ್ಷ ಸಿಎಂ ಎಂದು ಎದೆ ಬಡಿದುಕೊಂಡು ಹೇಳುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು. ಇದು ರೆಬೆಲಿಯನ್ ಸಿದ್ದರಾಮಯ್ಯ ವರ್ಸಸ್ ಕಾಂಪ್ರಮೈಸ್ ಸಿದ್ದರಾಮಯ್ಯ ನಡುವಿನ ಹೋರಾಟ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಮೊದಲಿನಂತೆ ರೆಬೆಲಿಯನ್ ಸಿದ್ದರಾಮಯ್ಯ ಆದರೆ ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟು ಕೊಡುವುದಿಲ್ಲ. ಕಾಂಪ್ರಮೈಸ್ ಸಿದ್ದರಾಮಯ್ಯ ಆದರೆ ಬಿಟ್ಟುಕೊಡುತ್ತಾರೆ ಎಂದರು.
ಸಿದ್ದರಾಮಯ್ಯ ಎಷ್ಟರ ಮಟ್ಟಿಗೆ ತಮ್ಮ ಗಟ್ಟಿತನ ಉಳಿಸಿಕೊಂಡಿದ್ದಾರೆ ಎಂಬುದು ಈ ತಿಂಗಳಿನಲ್ಲಿ ಗೊತ್ತಾಗಲಿದೆ. ನಾವು ನೋಡಿದ ಸಿದ್ದರಾಮಯ್ಯ ಮೊದಲಿನಿಂದಲೂ ರೆಬೆಲಿಯನ್. ಅವರದ್ದು ಯಾವಗಲೂ ಗಟ್ಟಿ ಗಡಸುತನದ ರಾಜಕಾರಣ. ಅದೇ ಮೂಲ ಸಿದ್ದರಾಮಯ್ಯ ಈಗ ಅಧಿಕಾರದ ಆಸೆಗಾಗಿ ಬದಲಾಗಿದ್ದಾರಾ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಒಳ ಜಗಳದ ವಿಚಾರವಾಗಿ, ದೇಶದಲ್ಲಿ ಕಾಂಗ್ರೆಸ್ ಪಕ್ಷ ನಮ್ಮ ವಿರೋಧಿ ಅವರ ಸಿದ್ಧಾಂತವನ್ನು ಬಿಜೆಪಿ ವಿರೋಧಿಸುತ್ತಾ ಬಂದಿದೆ. ದೇಶದಲ್ಲಿ ಕಾಂಗ್ರೇಸ್ಸೇತರ ಸರ್ಕಾರ ಇರಬೇಕು ಎಂಬುದು ನಮ್ಮ ನಿಲುವು ರಾಜ್ಯ ಕಾಂಗ್ರೆಸ್ ಸದ್ಯದ ಪರಿಸ್ಥಿತಿ ಲಾಭ ಪಡೆಯುವ ವಿಚಾರದಲ್ಲಿ ಸಮಯ ಬಂದಾಗಲೆಲ್ಲ ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
