ಕೋಲಾರ: ಎಲ್ಲಾ ಚುನಾವಣೆಗಳಲ್ಲಿಯೂ ಮೈತ್ರಿ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು, ಎಲ್ಲಾ ಚುನಾವಣೆಗಳಲ್ಲಿಯೂ ಮೈತ್ರಿ ಅಸಾಧ್ಯ. ಕೆಲವು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೈತ್ರಿ ಇರುವುದಿಲ್ಲ. ಲೋಕಸಭೆ, ವಿಧಾನಸಭೆ ಚುನಾವಣೆ ಬಂದಾಗ ಮಾತ್ರ ಮೈತ್ರಿ ಇರುತ್ತದೆ. ಎಲ್ಲಾ ಚುನಾವಣೆಯಲ್ಲಿ ಮೈತ್ರಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 20 ವರ್ಷಗಳಿಂದ ಜನರ ಸಂಪರ್ಕದಲ್ಲಿದ್ದರು. ಬಿಹಾರದ ಚುನಾವಣೆಯ ಚಿತ್ರಣವೇ ಬೇರೆ, ಕರ್ನಾಟಕದ ಚಿತ್ರಣವೇ ಬೇರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನದ ಪೈಪೋಟಿ ನಡೆಯುತ್ತಿದೆ. ಮುಖ್ಯಮಂತ್ರಿಯಾಗಿ ಎಷ್ಟು ಲೂಟಿ ಮಾಡಬೇಕು ಎನ್ನುವುದಷ್ಟೇ ಕಾಂಗ್ರೆಸ್ ಲೆಕ್ಕಾಚಾರವಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಒಕ್ಕಲಿಗ ಶಾಸಕರು ದೆಹಲಿ ಪರೇಡ್ ನಡೆಸಿದ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾವ ವಿಚಾರಕ್ಕೆ ದೆಹಲಿಗೆ ಹೋಗಿದ್ದಾರೆ ಎನ್ನುವುದು ಗೊತ್ತಿಲ್ಲ. ಇಲ್ಲಿ ಒಕ್ಕಲಿಗ ಪ್ರಾಧಾನ್ಯತೆ ಮುಖ್ಯವಲ್ಲ. 7 ಕೋಟಿ ಜನರ ಪರವಾಗಿ ನಡೆಯುತ್ತಿರುವ ಸರ್ಕಾರ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
