ಹುಬ್ಬಳ್ಳಿ: ಇಡಿ ಅಧಿಕಾರಿಗಳ ಸೋಗಿನಲ್ಲಿ 3.2 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿ ವಿಚಾರಣೆ ನೆಪದಲ್ಲಿ 2 ಕೆಜಿ 942 ಗ್ರಾಂ ಚಿನ್ನಾಭರಣ, ಎರಡು ಲಕ್ಷ ರೂಪಾಯಿ ನಗದು ದೋಚಿದ ಘಟನೆ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಸಮೀಪ ನೀಲಿಜಿನ್ ರಸ್ತೆಯಲ್ಲಿ ನಡೆದಿದೆ.
ಇಡಿ ಅಧಿಕಾರಿಗಳು ಎಂದು ಹೇಳಿಕೊಂಡ ಐವರ ತಂಡ ಕೇರಳ ಮೂಲದ ವ್ಯಾಪಾರಿ ಎಂ.ಆರ್. ಸುದೀನ್ ಅವರನ್ನು ಬೆದರಿಸಿ ಚಿನ್ನಾಭರಣ ದೋಚಿದೆ. ಕೆಲಸಗಾರ ವಿವೇಕ ಜೊತೆಗೆ ಮಂಗಳೂರಿನಿಂದ ನವೆಂಬರ್ 17ರಂದು ಬೆಳಗಾವಿಗೆ ಬರುವಾಗ ಸುದೀನ್ ಅವರು ಉಂಗುರ, ಚೈನ್, ಬಳೆ ಸೇರಿ 3.2 ರೂಪಾಯಿ ಮೌಲ್ಯದ ಆಭರಣಗಳನ್ನು ತಂದಿದ್ದು, ಬೆಳಗಾವಿ, ಧಾರವಾಡ, ಹುಬ್ಬಳ್ಳಿಯ ವಿವಿಧ ಆಭರಣ ಮಳಿಗೆಗಳಿಗೆ ತೆರಳಿ ಆರ್ಡರ್ ಪಡೆದಿದ್ದರು. ಹಳೆ ಹುಬ್ಬಳ್ಳಿ ಬಸ್ ನಿಲ್ದಾಣ ಎದುರಿನ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು.
ಅವರು ನವೆಂಬರ್ 19ರಂದು ಧಾರವಾಡಕ್ಕೆ ಹೋಗಿ ಹೋಟೆಲ್ ಗೆ ವಾಪಸ್ ಬರುವಾಗ ಅವರನ್ನು ತಡೆದ 5 ಮಂದಿಯ ತಂಡ ಇಡಿ ಅಧಿಕಾರಿಗಳು ಎಂದು ಹೇಳಿ ವಿಚಾರಣೆಗೆ ಬನ್ನಿ ಎಂದು ಕಾರ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಅವರನ್ನು ಬೆದರಿಸಿ ಹಲ್ಲೆ ನಡೆಸಿ ಚಿನ್ನಾಭರಣ ಇದ್ದ ಬ್ಯಾಗ್, ಹಣ ತೆಗೆದುಕೊಂಡಿದ್ದಾರೆ. ಬೆಳಗಾವಿಯಾಗಿ ಕಿತ್ತೂರು ಸಮೀಪ ವಿವೇಕ್ ಅವರನ್ನು ಇಳಿಸಿ, ಎಂ.ಕೆ. ಹುಬ್ಬಳ್ಳಿ ಸಮೀಪ ಸುದೀನ್ ಅವರನ್ನು ಮಾರ್ಗಮಧ್ಯ ಬಿಟ್ಟು ಪರಾರಿಯಾಗಿದ್ದಾರೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
