ಮಂಡ್ಯ: ಮಹಿಳೆ ಬೆದರಿಸಿ ಚಿನ್ನ, ವಜ್ರದ ಆಭರಣಗಳನ್ನು ದೋಚಿ ತಲೆಮರೆಸಿಕೊಂಡಿದ್ದ ಆರೋಪದ ಮೇರೆಗೆ ಪುರಸಭೆ ಮಾಜಿ ಅಧ್ಯಕ್ಷನನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ.
ಎಂ.ಕೆ. ಮರಿಗೌಡ ಬಂಧಿತ ಆರೋಪಿ. ಮದ್ದೂರು ದೊಡ್ಡಿ ಬೀದಿಯ ನಿವಾಸಿಯಾಗಿರುವ ಮರಿಗೌಡ ಅ.26ರಂದು ನೆರೆಮನೆಯ ನಿವಾಸಿ ಇಂಡಿಯನ್ ಗ್ಯಾಸ್ ಏಜೆನ್ಸಿ ಮಾಲೀಕ ಚಂದ್ರಶೇಖರ ಅವರ ಪತ್ನಿ ಸುಶೀಲಮ್ಮರನ್ನು ಬೆದರಿಸಿ ಚಿನ್ನ, ವಜ್ರದ ಆಭರಣ ದೋಚಿ ಪರಾರಿಯಾಗಿದ್ದರು.
ಮಹಿಳೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಸಂತ್ರಸ್ತರ ಮನೆಯ ಸಿಸಿಟಿವಿ ಕ್ಯಾಮರಾ ದೃಶ್ಯಗಳ ಆಧಾರದಲ್ಲಿ ವಿಚಾರಣೆ ನಡೆಸಿದಾಗ ಆರೋಪಿ ತಪ್ಪು ಒಪ್ಪಿಕೊಂಡಿದ್ದರು. ಮರಿಗೌಡನಿಂದ ಮಾಹಿತಿ ಪಡೆದು ಮಳವಳ್ಳಿ ಮತ್ತು ಮದ್ದೂರಿನ ಗಿರವಿ ಅಂಗಡಿಗಳಲ್ಲಿ ಒತ್ತೆ ಇಟ್ಟಿದ್ದ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
