ಬೆಂಗಳೂರು: ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದು ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.
ಶನಿವಾರ ಬೆಂಗಳೂರಿನ ಹೆಬ್ಬಾಳ ರಸ್ತೆಯ ಪಶು ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ ವಿಶ್ವ ಮೀನುಗಾರಿಕೆ ದಿನಾಚರಣೆ, ಮತ್ಸ್ಯ ಮೇಳ, ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮೀನುಗಾರರ ಕುಟುಂಬಕ್ಕೆ ಶಾಶ್ವತ ಸೂರು ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಮತ್ಸ್ಯಾಶ್ರಯ ಯೋಜನೆಯ ಮೂಲಕ ವಸತಿರಹಿತ 10,000 ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಹಣಕಾಸು ನೆರವು ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಕರಾವಳಿಯಲ್ಲಿ ರಾಜ್ಯದ ಮೊಟ್ಟಮೊದಲ ಸಮರ್ಪಿತ ಸಮುದ್ರ ಆಂಬ್ಯುಲೆನ್ಸ್ ಕಾರ್ಯರೂಪಕ್ಕೆ ತರಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರವೇ ಕಡಲ ತೀರದಲ್ಲಿ ಮೀನು ಸಮುದ್ರ ಆಂಬುಲೆನ್ಸ್ ಕಾರ್ಯಾರಂಭ ಮಾಡಲಾಗುವುದು. ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಮತ್ಸ್ಯ ಆಶಾಕಿರಣ ಯೋಜನೆಯಡಿ ನೀಡುತ್ತಿದ್ದ ಪರಿಹಾರವನ್ನು 1,500 ರೂ. ಗಳಿಂದ 3,000 ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದರು.
ನಾಡ ದೋಣಿಗಳಿಗೆ ಕೈಗಾರಿಕಾ ಸೀಮೆ ಎಣ್ಣೆಯನ್ನು ಪ್ರತಿ ಲೀಟರ್ ಗೆ 35 ರೂ. ದರದಲ್ಲಿ ವಿತರಿಸಲಾಗುವುದು. ಕರಾವಳಿ ಜಿಲ್ಲೆಗಳ ಮೀನುಗಾರಿಕಾ ಸಂಪರ್ಕ ರಸ್ತೆಗಳ ತಕ್ಷಣದ ಅಭಿವೃದ್ಧಿಗೆ 30 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ನೂತನ ಮೀನುಗಾರಿಕಾ ನೀತಿ ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದಾರೆ.
