ಬೆಂಗಳೂರು : ಬೆಂಗಳೂರಲ್ಲಿ 7 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಮತ್ತೋರ್ವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ನಿವಾಸಿಯಾದ ಆರೋಪಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದನು. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿ ತಮಿಳುನಾಡಿನಿಂದ ಬೆಂಗಳೂರಿಗೆ ಕರೆತಂದಿದ್ದಾರೆ.
ಬಂಧಿತನನ್ನ ಜೆ.ಎಕ್ಸ್ ವಿಯರ್ ಎಂದು ಗುರುತಿಸಲಾಗಿದೆ. ಈತನನ್ನ ಬಂಧಿಸಿ ಪೊಲೀಸರು ಸಿದ್ದಾಪುರ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಕುಪ್ಪಂ ನಲ್ಲಿ ಇನೋವಾ ಕಾರು ನಿಲ್ಲಿಸಿ ಬಾಕ್ಸ್ ಒಡೆದು ಹಣದ ಸಮೇತ ವ್ಯಾಗನರ್ ಕಾರಿನಲ್ಲಿ ಪರಾರಿಯಾಗಿದ್ದನು. ಕಾಡುಗೊಂಡನಹಳ್ಳಿ ನಿವಾಸಿಯಾದ ಜೆ.ಎಕ್ಸ್ ವಿಯರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಲ್ಲಿ 7 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಪೊಲೀಸ್ ಕಾನ್ ಸ್ಟೇಬಲ್ ಅಣ್ಣಪ್ಪ ಹಾಗೂ ಸಿಎಂಎಸ್ ಮಾಜಿ ನೌಕರನನ್ನು ಪೊಲೀಸರು ಬಂಧಿಸಿದ್ದರು. ಇದರ ಜೊತೆಗೆ 5. 30 ಕೋಟಿ ಹಣವನ್ನು ಕೂಡ ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದರು. ಇದೀಗ ತಮಿಳುನಾಡಿನಲ್ಲಿ ಮತ್ತೋರ್ವ ಆರೋಪಿಯನ್ನ ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದಾರೆ.
ರಾಬರಿ ಕೇಸ್ ಸಂಬಂಧ ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪ ನಾಯಕ್ ಎಂಬುವವರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದರು. ಅಣ್ಣಪ್ಪ ನಾಯ್ಕ್ ಇಡೀ ದರೋಡೆಯ ಮಾಸ್ಟರ್ ಮೈಂಡ್ ಎನ್ನಲಾಗಿದ್ದು, ಈತನ ಬಂಧನದ ಬೆನ್ನಲ್ಲೇ ಸ್ನೇಹಿತ ಝೇವಿಯರ್ ನನ್ನು ಕೂಡ ಬಂಧಿಸಲಾಗಿದೆ.
