ಬೆಂಗಳೂರು: ಬಿಡದಿಯಲ್ಲಿ 9 ಸಾವಿರ ಎಕರೆಯಲ್ಲಿ ಎಐ ಸಿಟಿ ನಿರ್ಮಾಣ ಮಾಡಲಾಗುವುದು. ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ, 41 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ, ಸುರಂಗ ರಸ್ತೆ, ಎಲಿವೇಟೆಡ್ ಕಾರಿಡಾರ್, ಬಿಸಿನೆಸ್ ಕಾರಿಡಾರ್ ಸೇರಿದಂತೆ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ₹1.5 ಲಕ್ಷ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಬೆಂಗಳೂರು ಸಮ್ಮಿಟ್ ನಲ್ಲಿ ಮಾತನಾಡಿದ ಡಿಸಿಎಂ, ಅನಿವಾಸಿ ಭಾರತೀಯರಿಗೆ ಪ್ರತ್ಯೇಕ ಇಲಾಖೆ ಆರಂಭಿಸಲಾಗುವುದು. ತಂತ್ರಜ್ಞಾನ ಮತ್ತು ಪ್ರತಿಭೆ ಬೆಂಗಳೂರಿನ ಆಧಾರ ಸ್ತಂಭಗಳಾಗಿವೆ. ದೇಶದ ಐಟಿ ರಫ್ತಿನಲ್ಲಿ ಶೇಕಡ 40 ರಿಂದ 45ರಷ್ಟು ಪಾಲು ಬೆಂಗಳೂರಿನದ್ದಾಗಿದೆ. ಇಲ್ಲಿರುವ ಮಾನವ ಸಂಪನ್ಮೂಲ ಬೇರೆ ಎಲ್ಲೂ ಇಲ್ಲ ಎಂದರು.
ಬೆಂಗಳೂರಿನಲ್ಲಿರುವ 1.40 ಕೋಟಿ ಜನರಲ್ಲಿ ಶೇಕಡ 20ರಷ್ಟು ಮಂದಿ ಐಟಿ ವೃತ್ತಿಪರರಿದ್ದಾರೆ. ಜಾಗತಿಕ ನಗರ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಬಯಸಿದ್ದು, ಮತ್ತಷ್ಟು ಬಲವಾಗಿ ಬೆಂಗಳೂರು ನಗರವನ್ನು ಬೆಳೆಸಲು ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದ್ದಾರೆ.
