ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ರೂಪಾಯಿ ಹಣ ದರೋದೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಬೀದರ್ ಆಯ್ತು, ಮಂಗಳೂರು ಆಯ್ತು. ಈಗ ರಾಜಧಾನಿ ಬೆಂಗಳೂರಿನಲ್ಲಿ ಅದು ಜನನಿಬಿಡ ರಸ್ತೆಯಲ್ಲಿ ಹಾಡಹಗಲೇ 7.11 ಕೋಟಿ ರೂಪಾಯಿ ದರೋಡೆ ಮಾಡಿಕೊಂಡು ಹೋಗಿದ್ದಾರೆ ಎಂದರೆ ಈ ಸರ್ಕಾರದ ಆಡಳಿತ ವೈಖರಿ ಹೇಗಿರಬ್ನೇಕು? ಬೆಂಗಳೂರಿನ ಫ್ಲೈ ಒವರ್, ಜನನಿಬಿಡ ರಸ್ತೆಗಳಲ್ಲಿ ವಾಹನಗಳು ಓಡಾಡಲೂ ಜಗವಿರಲ್ಲ. ಅಂಥದ್ದರಲ್ಲಿ ಟ್ರಾಫಿಕ್ ಜಾಮ್ ಇರುವ ರಸ್ತೆಯಲ್ಲಿ ಹಾಡಹಗಲೇ ಪೊಲೀಸರ ಕಣ್ತಪ್ಪಿಸಿ ದರೋಡೆ ಮಾಡಿದ್ದಾರೆ ಎಂದರೆ ಇದು ಕೂಡ ಬ್ರ್ಯಾಂಡ್ ಬೆಂಗಳೂರಿನ ಒಂದು ಭಾಗ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರದ ಈ ಆಡಳಿತದಲ್ಲಿ ಜೈಲಿನಲ್ಲಿರುವ ಕೈದಿಗಳಿಗೆ, ಉಗ್ರರಿಗೆ ಮೊಬೈಲ್ ವ್ಯವಸ್ಥೆ ಮಾಡಿದ್ದಾರೆ. ಜೈಲಿನಲ್ಲಿಯೇ ಮೊಬೈಲ್ ವ್ಯವಸ್ಥೆ ಮಾಡಿದವರೇ ಈ ರೀತಿ ಹಣ ದರೋಡೆಗೂ ವ್ಯವಸ್ಥೆ ಮಾಡಿರಬೇಕು. ಸರ್ಕಾರ, ಪೊಲೀಸ್ ಇಲಾಖೆ ಸತ್ತು ಹೋಗಿದೆ. ಗೃಹ ಸಚಿವರು ವರ್ಗಾವಣೆಯಲ್ಲಿ ಮುಳುಗಿದ್ದಾರೆ. ಕಾನೂನು ಸುವ್ಯವಸ್ಥೆ ಎಂಬುದೇ ರಾಜ್ಯದಲ್ಲಿ ಇಲ್ಲದಾಗಿದೆ. ದರೋಡೆಕೋರರು ರಾಜರೋಷವಾಗಿ ದರೋಡೆ ಮಾಡಿಕೊಂಡು ಹೋದರೂ ಇವರಿಗೆ ಹಿಡಿಯಲು ಆಗುತ್ತಿಲ್ಲ ಎಂದರೆ ಕಾನೂನು ವ್ಯವಸ್ಥೆ ಹೇಗಿದೆ ನೋಡಿ. ಬ್ಯಾಂಕ್ ಹಣಗಳಿಗೆ ಸುರಕ್ಷತೆ ಇಲ್ಲ ಅಂದಮೇಲೆ ಜನಸಾಮನ್ಯರ ಗತಿ ಏನು? ಎಂದು ಪ್ರಶ್ನಿಸಿದ್ದಾರೆ.
