ಸಿಡ್ನಿ : ಆಸ್ಟ್ರೇಲಿಯಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 8 ತಿಂಗಳ ಭಾರತೀಯ ಗರ್ಭಿಣಿ ಮಹಿಳೆ ದುರ್ಮರಣಕ್ಕೀಡಾಗಿದ್ದಾರೆ.
ಎರಡನೇ ಮಗುವಿಗೆ ಜನ್ಮ ನೀಡಲು ಕೆಲವು ವಾರಗಳ ಬಾಕಿ ಇತ್ತು, ಆದರೆ ಅಷ್ಟರಲ್ಲೇ 33 ವರ್ಷದ ಗರ್ಭಿಣಿ ಭಾರತೀಯ ಮಹಿಳೆ ಸಾವನ್ನಪ್ಪಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿದ್ದ ಸಮನ್ವಿತಾ ಧಾರೇಶ್ವರ್ ಕಳೆದ ವಾರ ತನ್ನ ಪತಿ ಮತ್ತು ಮೂರು ವರ್ಷದ ಮಗನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಹಾರ್ನ್ಸ್ಬೈಯ ಜಾರ್ಜ್ ಸ್ಟ್ರೀಟ್ನಲ್ಲಿ ಧಾರೇಶ್ವರ ಮತ್ತು ಅವರ ಕುಟುಂಬ ಪಾದಚಾರಿ ಮಾರ್ಗ ದಾಟುತ್ತಿದ್ದಾಗ ಹಿಂದಿನಿಂದ ಬಂದಿದ್ದ ಅತಿ ವೇಗದಲ್ಲಿದ್ದ BMW ಕಾರು ಕಿಯಾ ಕಾರಿಗೆ ಹಿಂದಿನಿಂದ ಅಪ್ಪಳಿಸಿದೆ. ಆಗ ಕಿಯಾ ಕಾರು ಮಹಿಳೆಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಸಮನ್ವಿತಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ದುರಾದೃಷ್ಟವಶಾತ್ ಅವರು ಹಾಗೂ ಅವರ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟಿದೆ.
ಐಷಾರಾಮಿ ಬಿಎಂಡಬ್ಲ್ಯು ಕಾರನ್ನು 19 ವರ್ಷದ ಪಿ-ಪ್ಲೇಟರ್ (ತಾತ್ಕಾಲಿಕ ಅಥವಾ ಪ್ರೊಬೇಷನರಿ ಪರವಾನಗಿ ಹೊಂದಿರುವ ಚಾಲಕ) ಆರನ್ ಪಾಪಜೋಗ್ಲು ಚಲಾಯಿಸುತ್ತಿದ್ದರು ಎಂದು ವರದಿಯಾಗಿದೆ. ಬಿಎಂಡಬ್ಲ್ಯು ಮತ್ತು ಕಿಯಾ ಕಾರುಗಳ ಚಾಲಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
