ಬೆಂಗಳೂರು : ರಾಜ್ಯದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ಎಂಬಂತೆ ಶೀಘ್ರವೇ 2 ತಿಂಗಳ ಬಾಕಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಹಣ ಇನ್ನೂ ಬಿಡುಗಡೆಯಾಗಿಲ್ಲ. ಆದಷ್ಟು ಬೇಗ ಬಿಡುಗಡೆ ಮಾಡ್ತೀವಿ ಎಂದರು.
ಕರ್ನಾಟಕದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಮೋಟಮ್ಮ ಅವರು ಸಚಿವರಾಗಿದ್ದಾಗ ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿ, ಮಹಿಳೆಯರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಇದೀಗ ನನ್ನ ಹೃದಯಕ್ಕೆ ಹತ್ತಿರವಾಗಿರುವ ಗೃಹಲಕ್ಷ್ಮಿ ಬ್ಯಾಂಕ್ ತರಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನವೆಂಬರ್ 28 ರಂದು ನಡೆಯಲಿರುವ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಗೆ ಚಾಲನೆ ಕುರಿತು ಬಾಲ ಭವನದಲ್ಲಿ ನಡೆದ ಜಿಲ್ಲಾಮಟ್ಟದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಸಚಿವರು, ಬಹುನಿರೀಕ್ಷಿತ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ತುಮಕೂರು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ಗಂಡನ ಉದ್ಯಮದಲ್ಲಿ ಹೆಂಡತಿ ಕೈಜೋಡಿಸುತ್ತಿದ್ದಳು. ಆದರೆ, ಇತ್ತೀಚೆಗೆ ಮಹಿಳೆಯರೆ ಉದ್ಯಮಿಗಳಾಗುತ್ತಿದ್ದಾರೆ. ಇಂತಹ ಮಹಿಳೆಯರಿಗೆ ಸಹಾಯ ಮಾಡುವ ಉದ್ದೇಶದಿಂದಲೇ ಗೃಹಲಕ್ಷ್ಮಿ ಬ್ಯಾಂಕ್ ಆರಂಭಿಸಲಾಗುತ್ತಿದೆ. ಧರ್ಮಸ್ಥಳ ಸ್ವ ಸಹಾಯ ಸಂಘ ಕಳೆದ 20 ವರ್ಷಗಳಿಂದ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಅವರ ಸೇವೆ ಸದಾ ಸ್ಮರಣೀಯ. ಆದರೆ ಕೆಲವೊಂದು ಖಾಸಗಿ ಫೈನಾನ್ಸ್ ಕಂಪನಿಗಳಿಂದ ಜನರಿಗೆ ತೊಂದರೆಯಾಗುತ್ತಿದೆ. ಇದನ್ನು ತಡೆಗಟ್ಟಲು ಗೃಹಲಕ್ಷ್ಮಿ ಸಂಘ ಸಹಾಯವಾಗಲಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುವುದು ಎಂದರು.
ಗೃಹಲಕ್ಷ್ಮಿ ಸಂಘಕ್ಕೆ ಸೇರ ಬಯಸುವವರಿಗೆ ಯಾವುದೇ ಒತ್ತಡ ಇಲ್ಲ. ಬ್ಯಾಂಕ್ ಗೆ ಸೇರ ಬಯಸುವವರು ಸಾವಿರ ರೂಪಾಯಿ ಕೊಟ್ಟು ಶೇರ್ ಹೋಲ್ಡರ್ ಆಗಬೇಕು. ಸಂಪೂರ್ಣ ಕ್ಯಾಶ್ ಲೆಸ್ ವ್ಯವಹಾರ ನಡೆಯಲಿದ್ದು, ಷೇರುದಾರರಾದ ಬಳಿಕ ಪ್ರತಿ ತಿಂಗಳು ಇನ್ನೂರು ರೂಪಾಯಿ ಕಟ್ಟಬೇಕು, ಆರು ತಿಂಗಳಲ್ಲಿ ಲೋನ್ ಪಡೆಯಬಹುದು, ಮೂವತ್ತು ಸಾವಿರದಿಂದ ಮೂರು ಲಕ್ಷದವರೆಗೂ ಸಾಲ ನೀಡಲಾಗುವುದು. ಗೃಹಲಕ್ಷ್ಮಿ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ಮಾತ್ರ ನೀಡಲಾಗುವುದು, ಗುಂಪು, ಸಂಘಗಳಿಗೆ ಸಾಲ ನೀಡಲಾಗುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳ ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಇದು ಇಡೀ ವಿಶ್ವದಲ್ಲೇ ದಾಖಲೆಯಾಗಿ ಉಳಿಯಲಿದೆ. ಬ್ಯಾಂಕ್ ಬಗ್ಗೆ ಇಂಥಹ ಪರಿಕಲ್ಪನೆಯನ್ನು ಇಟ್ಟುಕೊಂಡಿರುವೆ ಎಂದರು.
ಮುಂದೆ ಯಾವುದೇ ಸರ್ಕಾರಗಳು ಬಂದರೂ ಗೃಹಲಕ್ಷ್ಮಿ ಬ್ಯಾಂಕ್ ಅನ್ನು ಮುಚ್ಚುವ ಪ್ರಯತ್ನ ಮಾಡುವುದಿಲ್ಲ. ಇದು ನಿರಂತರ ಪ್ರಕ್ರಿಯೆ. ಮಹಿಳೆಯರಿಗೆ ಅನುಕೂಲ ಆಗುವ ದೃಷ್ಟಿಯಿಂದ ಬ್ಯಾಂಕ್ ತೆರೆಯಲಾಗುತ್ತಿದ್ದು, ಕೃಷಿ, ಹೈನುಗಾರಿಕೆ, ವಾಹನ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ವಿವಿಧ ರೀತಿಯಲ್ಲಿ ಲೋನ್ ತೆಗೆದುಕೊಳ್ಳಬಹುದು ಎಂದು ವಿವರಿಸಿದರು.
