ತಿರುವನಂತಪುರಂ: ಶಬರಿ ಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಹೊಸ ವೈರಸ್ ಹರಡುವ ಆತಂಕ ಎದುರಾಗಿದೆ. ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ಪ್ರಕರಣ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಭಕ್ತರಿಗೆ ಕಟ್ಟೆಚ್ಚರಕ್ಕೆ ಘೋಷಿಸಲಾಗಿದೆ.
ಕೇರಳದಲ್ಲಿ ನೂರಾರು ಜನರಿಗೆ ಮೆದುಳು ತಿನ್ನುವ ಅಮೀಬಾ ವೈರಸ್ ಕಾಣಿಸಿಕೊಂಡಿದ್ದು, ಇದು ನೀರಿನಿಂದ ಹರಡುವ ಸಾಧ್ಯತೆ ಇದೆ. ಕೊಲ್ಲಂ, ತಿರುವನಂತಪುರಂ ನಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಶಬರಿಮಲೆಯಲ್ಲಿ ಪಂಪಾನದಿಯಲ್ಲಿ ಪುಣ್ಯ ಸ್ನಾನ ಮಾಡುವಾಗ ಎಚ್ಚರ ವಹಿಸುವಂತೆ ತಿಳಿಸಲಾಗಿದೆ. ಮೂಗಿಗೆ ನೀರು ಹೋಗದಂತೆ ಎಚ್ಚರವಹಿಸಬೇಕು. ಬಿಸಿ ನೀರನ್ನು ಮಾತ್ರ ಸೇವಿಸಬೇಕು. ತೊಳೆದ ಹಣ್ಣುಗಳನ್ನು ತಿನ್ನಬೇಕು, ತಲೆ ನೋವು, ಅನಾರೋಗ್ಯದಂತಹ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವಂತೆ ಸೂಚಿಸಲಾಗಿದೆ.
ಕರ್ನಾಟಕದಿಂದಲೂ ಶಬರಿಮಲೆಗೆ ಅಯ್ಯಪ್ಪ ಸ್ವಾಮಿ ಭಕ್ತರು ತೆರಳುತ್ತಿರುವುದರಿಂದ ಮಾರ್ಗಸೂಚಿ ಪ್ರಕಟಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮುಂದಾಗಿದೆ.
