ಉಡುಪಿ: ವಿದ್ಯಾರ್ಥಿಗಳು ಜನಿವಾರ ಹಾಕಿದ್ದಕ್ಕೆ, ಕೈಯಲ್ಲಿ ದಾರ ಕಟ್ಟಿಕೊಂಡಿದ್ದಕ್ಕೆ ಅದನ್ನು ಪ್ರಶ್ನಿಸಿ, ವಿದ್ಯಾರ್ಥಿಗಳಿಗೆ ನಿರಂತರವಾಗಿ ಬಸ್ಕಿ ಹೊಡೆಸಿ ಶಿಕ್ಷಿಸುತ್ತಿದ್ದ ದೈಹಿಕ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಉಡುಪಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅತಿಥಿ ದೈಹಿಕ ಶಿಕ್ಷಕ ಮದನ್ ಮಕಂದಾರ್ ಸಸ್ಪೆಂಡ್ ಆಗಿರುವ ಶಿಕ್ಷಕ. ಜನಿವಾರ ಹಾಕಿದ್ದಕ್ಕೆ, ಕೈಗೆ ದಾರಗಳನ್ನು ಕಟ್ಟಿಕೊಂಡಿದ್ದ ವಿದ್ಯಾರ್ಥಿಗಳಿಗೆ ನಿರಂತರವಾಗಿ ಹಿಂಸಿಸುತ್ತಿದ್ದರು. ಮನಬಂದಂತೆ ವಿದ್ಯಾರ್ಥಿಗಳಿಗೆ ಬಸ್ಕಿ ಹೊಡೆಸಿ ಶಿಕ್ಷಿಸುತ್ತಿದ್ದರು. ಇದರಿಂದ ನೊಂದ ವಿದ್ಯಾರ್ಥಿಗಳು ಪೋಷಕರಿಗೆ ದೂರು ನೀಡಿದ್ದರು.
ಕಲಬುರಗಿ ಮೂಲದ ಶಿಕ್ಷಕ ಮದನ್ ಮಕಂದಾರ್ ವಿರುದ್ಧ ಪೋಷಕರು ಹಾಗೂ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ ಪ್ರಾಂಶುಪಾಲರಿಗೂ ದೂರು ನೀಡಿದ್ದರು. ಹಲವು ಬಾರಿ ಪ್ರಾಂಶುಪಾಲರು ಕೂಡ ಶಿಕ್ಷಕನಿಗೆ ಎಚ್ಚರಿಕೆ ನೀಡಿ ಬುದ್ಧಿಹೇಳಿದ್ದರು. ಆದಾಗ್ಯೂ ಹಳೇ ಚಾಳಿ ಮುಂದುವರೆಸಿದ್ದ ದೈಹಿಕ ಶಿಕ್ಷಕನನ್ನು ಪ್ರಾಂಶುಪಾಲರು ಕರ್ತವ್ಯದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
