ಬೆಂಗಳೂರು: ಡೇಟಿಂಗ್ ಆಪ್ ಮೂಲಕ ಯುವಕ, ಯುವತಿಯನ್ನು ಪರಿಚಯ ಮಾಡಿಕೊಂಡು ಹೋಟೆಲ್, ಲಾಡ್ಜ್ ಗಳಿಗೆ ಕರೆದೊಯ್ದು ಅವರಿಂದ ಹಣ, ಚಿನ್ನಾಭರಣಗಳನ್ನು ದೋಚುತ್ತಿದ್ದ ಇಬ್ಬರು ಪ್ರೇಮಿಗಳನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಗಳಾದ ಹರ್ಷವರ್ಧನ್ ಹಾಗೂ ಕವಿತಾಪ್ರಿಯಾ ಬಂಧಿತ ಲವರ್ಸ್. ಹರ್ಷವರ್ಧನ್ ಹಾಗೂ ಕವಿತಾಪ್ರಿಯಾ ಇಬ್ಬರೂ ಪ್ರೇಮಿಗಳಾಗಿದ್ದು, ಸಣ್ಣಪುಟ್ಟ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಶೋಕಿ ಜೀವನಕ್ಕೆ ತಮ್ಮ ದುಡಿಮೆ ಸಾಲುತ್ತಿಲ್ಲ ಎಂದು ಪಕ್ಕಾ ಪ್ಲಾನ್ ಮಾಡಿ ಡೇಟಿಂಗ್ ಆಪ್ ಆರಂಭಿಸಿದ್ದಾರೆ. Happen app ಎಂಬ ಡೇಟಿಂಗ್ ಆಪ್ ಮೂಲಕ ಯುವ ಜನತೆಯನ್ನು ಬಲೆಗೆ ಕೆಡವುತ್ತಿದ್ದ ಈ ಜೋಡಿ ಹಣ ದೋಚುವುದನ್ನು ಕಾಯಕ ಮಾಡಿಕೊಂಡಿದ್ದರು.
ಡೇಟಿಂಗ್ ಆಪ್ ಮೂಲಕ ಮೊದಲು ಕವಿತಾಪ್ರಿಯಾ ಪರಿಚಯಿಸಿಕೊಂಡು ಬಳಿಕ ಯುವಕರನ್ನು ಸುತ್ತಾಟಕ್ಕೆ, ಹೋಟೆಲ್, ಲಾಡ್ಜ್ ಗಳಿಗೆ ಕರೆದೊಯ್ಯುತ್ತಿದ್ದಳು. ಹೀಗೆ ಬಲೆಗೆ ಬಿದ್ದ ಯುವಕರಿಗೆ ಚೆನ್ನಾಗಿ ಕುಡಿಸಿ, ರೂಮಿಗೆ ಊಟವನ್ನು ತರಿಸುತ್ತಿದ್ದಳು. ಊಟ ಹಾಗೂ ಕುಡಿಯುವ ನೀರಿನಲ್ಲಿ ಪ್ರಜ್ಞೆ ತಪ್ಪಿಸುವ ಮಿಶ್ರಣ ಬೆರೆಸಿ ಕೊಡುತ್ತಿದ್ದಳು. ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆಯ ಜೊತೆ ಹರ್ಷವರ್ಧನ್ ಜೊತೆ ಸೇರಿ ಹಣ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು.
ಡೇಟಿಂಗ್ ಆಪ್ ನಲ್ಲಿ ಕವಿತ್ರಾಪ್ರಿಯಾಳಿಂದ ಮೋಸಹೋದ ಸಾಫ್ಟ್ ವೇರ್ ಇಂಜಿನಿಯರ್ ಓರ್ವ ಇಂದಿರಾನಗರ ಠಾಣೆಯಲ್ಲಿ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಕವಿತಾಪ್ರಿಯಾ ಹಾಗೂ ಆಕೆಯ ಲವರ್ ಹರ್ಷವರ್ಧನ್ ನನ್ನು ಬಂಧಿಸಿದ್ದಾರೆ.
