ಕನಿಷ್ಠ ಬೆಂಬಲ ಯೋಜನೆಯಡಿ ಜೋಳ, ರಾಗಿ, ಕಿರುಧಾನ್ಯಗಳ ಖರೀದಿ : ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಮತ್ತು ಹಿಂಗಾರು ಋತುವಿನಲ್ಲಿ ಬೆಳೆದ ಕಿರು ಸಿರಿಧಾನ್ಯಗಳಾದ ಸಾಮೆ/ನವಣೆ, ರಾಗಿ, ಜೋಳ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಖರೀದಿಸಲಾಗುವುದು ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿ ಆದ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಸರ್ಕಾರದ ಆದೇಶದಂತೆ ಬೆಂಬಲ ಬೆಲೆ ಯೋಜನೆಯಡಿ ಕಿರು ಸಿರಿಧಾನ್ಯ ಸಾಮೆ/ನವಣೆ, ರಾಗಿ, ಜೋಳ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ಮೊದಲು ಕೃಷಿ ಇಲಾಖೆಯಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಆಯಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ, ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕೇಂದ್ರ ಕಚೇರಿಗಳಲ್ಲಿ ತೆರೆಯಲಾಗುವ ಖರೀದಿ ಕೇಂದ್ರಗಳಲ್ಲಿ ಜೋಳ ಮಾರಾಟ ಮಾಡಲು ನೋಂದಾಯಿಸಿಕೊಳ್ಳಬೇಕು.

*ಬೆಲೆ(ಕ್ವಿಂಟಲ್ ಗೆ)

ಬಿಳಿಜೋಳ-ಹೈಬ್ರೀಡ್: ರೂ.3699
ಬಿಳಿಜೋಳ- ಮಾಲ್ದಂಡಿ: ರೂ.3749
ರಾಗಿ: ರೂ.4886
ಕಿರು ಸಿರಿಧಾನ್ಯ (ಸಾಮೆ ಮತ್ತು ನವಣೆ): ರೂ.4886 ನಿಗದಿಪಡಿಸಲಾಗಿದೆ.
ನೋಂದಣಿ ಮತ್ತು ಖರೀದಿ ಅವಧಿ:
ರಾಗಿ ಮತ್ತು ಕಿರು ಸಿರಿಧಾನ್ಯಗಳಿಗೆ ಡಿ.15 ರ ವರೆಗೆ ನೋಂದಣಿಗೆ ಅವಕಾಶವಿದ್ದು, 2026 ರ ಜನವರಿ 01 ರಿಂದ ಮಾರ್ಚ್ 31 ರ ವರೆಗೆ ಖರೀದಿಸಲಾಗುವುದು.
ಜೋಳ ಉತ್ಪನ್ನಕ್ಕೆ 2026ರ ಮಾರ್ಚ್ 31 ರ ವರೆಗೆ ನೋಂದಣಿಗೆ ಅವಕಾಶವಿದ್ದು, 2026 ರ ಜನವರಿ 01 ರಿಂದ ಏಪ್ರಿಲ್ 30 ರ ವರೆಗೆ ಖರೀದಿಸಲಾಗುವುದು.

ಖರೀದಿ ಕೇಂದ್ರಗಳ ವಿವರ:
ಬಳ್ಳಾರಿ ತಾಲ್ಲೂಕು: ಬಳ್ಳಾರಿ ತಾಲ್ಲೂಕು ವ್ಯವಸಾಯ ಉತ್ಪನ್ನ ಸಹಕಾರ ಸಂಘ, ಮೋಕ, ಅಸುಂಡಿ, ರೂಪನಗೂಡಿ ಗ್ರಾಮಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.
ಕುರುಗೋಡು: ಕುರುಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.
ಸಿರುಗುಪ್ಪ: ಕೆ.ಬೆಳಗಲ್ಲು, ಕರೂರು, ಹಚ್ಚೋಳ್ಳಿ, ಬೂದುಗುಪ್ಪ, ಬಿ.ಎಂ.ಸೂಗೂರು, ತಾಳೂರು, ಮುದ್ದಟನೂರು, ಅರಳಿಗನೂರು ಗ್ರಾಮಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.
ಕಂಪ್ಲಿ: ಕಂಪ್ಲಿ ಮತ್ತು ಎಮ್ಮಿಗನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.
ಸಂಡೂರು: ಸಂಡೂರು ಮತ್ತು ಚೋರನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.

ನೋಂದಣಿ ಪ್ರಕ್ರಿಯೆ:
ರೈತರು ನೋಂದಣಿಯನ್ನು ತಾಲ್ಲೂಕು ಮಟ್ಟದ ಮತ್ತು ಹೋಬಳಿ ಮಟ್ಟದ ಮೋಕ, ಹಚ್ಚೋಳ್ಳಿ, ಕರೂರು ಖರೀದಿ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಮಾಡಲಾಗುವುದು. ಖರೀದಿ ಕೇಂದ್ರಕ್ಕೆ ರೈತರು ಕೃಷಿ ಇಲಾಖೆಯಿಂದ ಪಡೆದಿರುವ ಫ್ರೂಟ್ಸ್ ಐ.ಡಿ (ರೈತರ ನೊಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ಮತ್ತು ಆಧಾರ್ನೊಂದಿಗೆ ನೋಂದಣಿ ಕೇಂದ್ರಕ್ಕೆ ಬರಬೇಕು.

ಬೆಂಬಲ ಬೆಲೆಗಾಗಿ ರೈತರನ್ನು ಪ್ರತ್ಯೇಕವಾಗಿ ನೋಂದಾಯಿಸದೆ ಕೇವಲ ಅವರ ಫ್ರೂಟ್ಸ್ ಐ.ಡಿ.ಯ ಮೂಲಕ ಖರೀದಿಗೆ ನೋಂದಾಯಿಸಲಾಗುವುದು. ಫ್ರೂಟ್ಸ್ ಐ.ಡಿಯನ್ನು ರೈತರಿಂದಲೇ ಪ್ರಸ್ತುತ ಸಾಲಿನ ಫ್ರೂಟ್ಸ್ ಐ.ಡಿ ಪಡೆಯಲಾಗುವುದು. ರೈತರ ಬಳಿ ಫ್ರೂಟ್ಸ್ ಐ.ಡಿ ಇಲ್ಲದಿದ್ದಲ್ಲಿ ಅಥವಾ ಅವರ ಫ್ರೂಟ್ಸ್ ಐ.ಡಿ ಮಾಹಿತಿ ಪರಿಷ್ಕರಿಸಲು ಕೃಷಿ ಇಲಾಖೆಗೆ ಸಂಪರ್ಕಿಸಬೇಕು.

ಪ್ರತಿಯೊಬ್ಬ ರೈತರ ಫ್ರೂಟ್ಸ್ ಐ.ಡಿ ನಮೂದಿಸಿದ ನಂತರ ಫ್ರೂಟ್ಸ್ ದತ್ತಾಂಶದಿಂದದ ರೈತರ ಅಗತ್ಯ ಮಾಹಿತಿ ಲಭ್ಯವಾಗಲಿದೆ. ಮಾಹಿತಿಯಲ್ಲಿ ರೈತರ ಹೆಸರು, ವಿಳಾಸ, ಜಾತಿ, ವಯಸ್ಸು, ಮೊಬೈಲ್ ಸಂಖ್ಯೆ, ಜಮೀನು ಮತ್ತು ಬೆಳೆದಿರುವ ಬೆಳೆಯ ವಿವರಗಳು ಹಾಗೂ ರೈತರ ಬ್ಯಾಂಕ್ ಖಾತೆಯ ವಿವರಗಳು ಲಭ್ಯವಿರುತ್ತವೆ. ಹಾಗಾಗಿ ಪ್ರತ್ಯೇಕವಾಗಿ ಬೇರಾವುದೇ ದಾಖಲೆ ನೀಡುವ ಅವಶ್ಯಕತೆ ಇರುವುದಿಲ್ಲ.

ಫ್ರೂಟ್ಸ್ ದತ್ತಾಂಶದನ್ವಯ ರೈತರ ಬೆಳೆ ಸಮೀಕ್ಷೆ ವಿವರದಂತೆ ಬೆಳೆ ವಿಸ್ತೀರ್ಣಕ್ಕನುಗುಣವಾಗಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬಹುದಾದ ಗರಿಷ್ಠ ಪ್ರಮಾಣವನ್ನು ತೋರಿಸಲಾಗುವುದು. ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿದಾಗ ಅದೇ ಖರೀದಿ ಕೇಂದ್ರದಲ್ಲೇ ಖರೀದಿ ಮಾಡಿಕೊಳ್ಳಲಾಗುವುದು. ರೈತರು ಖರೀದಿ ವಿವರಗಳನ್ನು ಒಪ್ಪಿ ನಮೂದಿಸಿದ ನಂತರ ಸ್ವೀಕೃತಿಯನ್ನು ಮುದ್ರಿಸಿ ರೈತರಿಗೆ ನೀಡಲಾಗುವುದು. ರೈತರು ಭತ್ತ/ರಾಗಿ/ಜೋಳ ಸರಬರಾಜು ಮಾಡುವಾಗ ಎಫ್.ಎ.ಕ್ಯೂ ಗುಣಮಟ್ಟವನ್ನು ಪರಿಶೀಲಿಸಿ ಖರೀದಿಸಲಾಗುವುದು.

ರೈತರ ಖರೀದಿ ಮಿತಿ:
ಜೋಳವನ್ನು ಪ್ರತಿ ರೈತರಿಂದ ಪ್ರತಿ ಎಕರೆಗೆ 15 ಕ್ವಿಂಟಾಲ್ ನಂತೆ ಗರಿಷ್ಠ 150 ಕ್ವಿಂಟಾಲ್ ಮೀರದಂತೆ ಖರೀದಿಸಲಾಗುವುದು. ರಾಗಿಯನ್ನು ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಠ 50 ಕ್ವಿಂಟಲ್ ಮೀರದಂತೆ ಖರೀದಿಸಲಾಗುವುದು.

ಕಿರು ಸಿರಿಧ್ಯಾನ (ಸಾಮೆ ಮತ್ತು ನವಣೆ) ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಲ್ ನಂತೆ ಗರಿಷ್ಠ 50 ಕ್ವಿಂಟಾಲ್ ಮೀರದಂತೆ ಖರೀದಿಸಲಾಗವುದು.

ಹಣ ಪಾವತಿ:
ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ ಸರಬರಾಜು ಮಾಡಿದ ರೈತರಿಗೆ ಅವರು ಕೃಷಿ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಹಣ ಪಾವತಿಸಲಾಗುವುದು.

ದಲ್ಲಾಳಿ/ಏಜೆಂಟರ್ಗಳಿಗೆ ಎಚ್ಚರಿಕೆ:
ಮಧ್ಯವರ್ತಿಗಳು, ಏಜೆಂಟರ್ಗಳು ಖರೀದಿ ಕೇಂದ್ರಗಳಿಗೆ ರಾಗಿ, ಜೋಳವನ್ನು ತಂದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಜಿಲ್ಲಾ ವ್ಯವಸ್ಥಾಪಕರ ಕಚೇರಿಯ ಮೊ.8867271187, 974056703 ಮತ್ತು ಬಳ್ಳಾರಿ ಮೊ.9008841654, ಕಂಪ್ಲಿ ಮೊ.9986266823, ಸಿರುಗುಪ್ಪ ಮೊ.7259598625, ಕುರುಗೋಡು ಮೊ.8951307333, ಸಂಡೂರು ಮೊ.9980676497 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read