ಬೆಂಗಳೂರು: ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ತಕ್ಷಣ ಸಕಾಲಿಕ ಸಹಾಯ ನೀಡುವ ಸಲುವಾಗಿ ರಾಜ್ಯ ಸರ್ಕಾರ ಅಕ್ಕ ಪಡೆ ಆರಂಭಿಸಿದೆ. ನವೆಂಬರ್ 19 ರಿಂದ ಅಕ್ಕ ಪಡೆ ಕಾರ್ಯಾರಂಭ ಮಾಡಲಿದೆ.
ಎರಡು ವರ್ಷಗಳ ಹಿಂದೆ ಬೀದರ್ ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ಅಕ್ಕ ಪಡೆ ಯಶಸ್ವಿಯಾಗಿದ್ದು, ಇದನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು. ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು, ಮಂಗಳೂರು, ಉಡುಪಿ, ಬೆಳಗಾವಿ, ಬೆಂಗಳೂರು, ಮೈಸೂರು ಸೇರಿ ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಅಕ್ಕ ಪಡೆ ಕಾರ್ಯನಿರ್ವಹಿಸಲಿದೆ. ನಂತರ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಅಕ್ಕ ಪಡೆ ಕಾರ್ಯ ನಿರ್ವಹಿಸಲಿದೆ. ಶಾಲಾ ಕಾಲೇಜು, ಬಸ್ ನಿಲ್ದಾಣ, ಮಾಲ್, ಪಾರ್ಕ್, ದೇವಸ್ಥಾನ ಸೇರಿದಂತೆ ಜನದಟ್ಟಣೆ ಪ್ರದೇಶಗಳಲ್ಲಿ ಕಿಡಿಗೇಡಿಗಳ ಮೇಲೆ ನಿಗಾ ವಹಿಸಲಿದೆ. ವಿದ್ಯಾರ್ಥಿನಿಯರು, ಮಹಿಳೆಯರು, ಯುವತಿಯರನ್ನು ಚುಡಾಯಿಸುವ, ಕೀಟಲೆ ಮಾಡುವ, ಅಸಭ್ಯ ವರ್ತನೆ ತೋರುವ ಪುಂಡರನ್ನು ಹಿಡಿದು ಪಾಠ ಕಲಿಸಲಿದೆ. ನಗರ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಅಕ್ಕ ಪಡೆ ಕಾರ್ಯನಿರ್ವಹಿಸಲಿದೆ.
