ಶ್ರೀನಗರ: ದೆಹಲಿಯ ಕೆಂಪುಕೋಟೆಯ ಮೆಟ್ರೋ ನಿಲ್ದಾಣದಬಳಿ ಕಾರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ತನಿಖಾ ತಂಡಗಳು ಜಮ್ಮು-ಕಾಶ್ಮೀರ ಅನಂತ್ ನಾಗ್ ಜಿಲ್ಲೆಯಲ್ಲಿ ದಾಳಿ ನಡೆಸಿವೆ.
ಅನಂತ್ ನಾಗ್ ಜಿಲ್ಲೆಯ ಮಲಕ್ ನಾಗ್ ಪ್ರದೇಶದಲ್ಲಿರುವ ವೈದ್ಯರ ನಿವಾಸಗಳ ಮೇಲೆ ಕಾಶ್ಮೀರದ ಕೌಂಟರ್ ಇಂಟಲಿಜನ್ಸ್ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದೆ.
ಶೋಧದ ವೇಳೆ ಹರಿಯಾಣ ಮೂಲದ ಮಹಿಳಾ ವೈದ್ಯೆಯೊಬ್ಬರ ಮನೆಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿರುವುದು ಪತ್ತೆಯಾಗಿದೆ. ಅಧಿಕಾರಿಗಳು ಮನೆಯಿಂದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಮತ್ತೊಂದೆಡೆ ಸ್ಫೋಟ ಪ್ರಕರಣ ಸಂಬಂಧ ಡ್ರೈಫ್ರೂಟ್ಸ್ ಮಾರಾಟಗಾರ ಬಿಲಾಲ್ ಅಹ್ಮದ್ ವಾನಿ ಹಾಗೂ ಅವರ ಮಗ ಜಾಸಿರ್ ಬಿಲಾಲ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಬಿಲಾಲ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
