ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಆಡುವಳ್ಳಿ ಗ್ರಾಮದ ಸಮೀಪ 9ನೇ ಮೈಲುಗಲ್ಲು ಮಡೋಡಿ ಸಮೀಪ ಕಾಡಾನೆ ಮತ್ತು ಸ್ವಿಫ್ಟ್ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರ್ ಜಖಂಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.
ಆಡುವಳ್ಳಿಯ ಬೂರದಮನೆಯ ಪ್ರದೀಪ್ ಎನ್.ಆರ್. ಪುರಕ್ಕೆ ಬಂದು ತಮ್ಮ ಮನೆಗೆ ಕಾರ್ ನಲ್ಲಿ ವಾಪಸ್ ತೆರಳುತ್ತಿದ್ದ ವೇಳೆ ಕಾಡಿನ ಮಾರ್ಗದಲ್ಲಿ ಎರಡು ಆನೆಗಳು ರಸ್ತೆ ದಾಟುತ್ತಿದ್ದವು. ಒಂದು ಆನೆ ರಸ್ತೆ ದಾಟಿದ್ದು, ಮತ್ತೊಂದು ಆನೆ ರಸ್ತೆ ಮಧ್ಯದಲ್ಲಿ ದಿಢೀರನೆ ನಿಂತಿದೆ. ಈ ವೇಳೆ ಕಾರ್ ಡಿಕ್ಕಿ ಹೊಡೆದಿದ್ದು, ಕಾರ್ ಮೇಲೆಯೇ ಆನೆ ಬಿದ್ದು, ಗಾಬರಿಯಿಂದ ತಕ್ಷಣ ಎದ್ದು ಓಡಿದೆ.
ಆನೆ ಬಿದ್ದಿದ್ದರಿಂದ ಕಾರ್ ಸಂಪೂರ್ಣ ಜಖಂಗೊಂಡಿದ್ದು, ಪ್ರದೀಪ್ ಅಪಾಯದಿಂದ ಪಾರಾಗಿದ್ದಾರೆ. ಚಿಕ್ಕಗ್ರಹಾರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
