ಮಂಗಳೂರು: ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದು ತಮ್ಮ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವುದಾಗಿ ಸೌಜನ್ಯಾ ಪರ ಹೋರಾಟಗಾರ ಟಿ. ಜಯಂತ್ ಅವರು ರಾಜ್ಯಪಾಲರು ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಎಸ್ಐಟಿ ಅಧಿಕಾರಿಗಳು ನನಗೆ ಬೆದರಿಕೆ ಹಾಕಿದ್ದಾರೆ. ನಂತರ ದೂರುದಾರ ಚಿನ್ನಯ್ಯನನ್ನು ಕರೆಸಿ ಆತನ ಮೂಲಕ ತೀವ್ರವಾಗಿ ಹಲ್ಲೆ ಮಾಡಿಸಿದರು. ಅದೇ ರೀತಿ ಚಿನ್ನಯ್ಯನ ಮೇಲೆ ಹಲ್ಲೆ ನಡೆಸಿ ನನಗೆ ಬೆದರಿಸಿದ್ದಾರೆ. ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ. ಎಸ್ಐಟಿ ಅಧಿಕಾರಿಗಳ ಹಲ್ಲೆಯಿಂದ ಗಾಯಗೊಂಡ ನಾನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ ಎಂದು ಜಯಂತ್ ದೂರಿದ್ದಾರೆ.
ಅಲ್ಲದೇ, ನನ್ನಿಂದ ಯಾವುದೇ ಹೇಳಿಕೆ ಪಡೆಯದೇ ಅವರಾಗಿಯೇ ಹೇಳಿಕೆಯನ್ನು ಟೈಪ್ ಮಾಡಿದ್ದಾರೆ. ಪ್ರತಿದಿನ ಎಸ್ಐಟಿ ಕಚೇರಿಗೆ ಕರೆಸಿ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾರೆ. ಸುಳ್ಳು ಸಾಕ್ಷಿ ಹೇಳುವಂತೆ ಒತ್ತಾಯಿಸಿದ್ದಾರೆ. ನ್ಯಾಯಾಲಯದಿಂದ ತಾತ್ಕಾಲಿಕ ತಡೆ ಲಭಿಸಿದ ನಂತರ ಈಗ ದೂರು ನೀಡಿದ್ದೇನೆ ಎಂದು ಜಯಂತ್ ತಿಳಿಸಿದ್ದಾರೆ.
