ಬೆಂಗಳೂರು: ಪ್ರಧಾನ ಮಂತ್ರಿ ಮತ್ಯಸಂಪದ ಯೋಜನೆಯಡಿ ನಿರ್ವಹಣೆ ನಿಯಂತ್ರಣ ಮತ್ತು ಮೇಲ್ವಿಚಾರಣೆಗಾಗಿ 12,003 ಮೀನುಗಾರಿಕಾ ದೋಣಿಗಳಿಗೆ 43.69 ಕೋಟಿ ರೂಪಾಯಿ ವೆಚ್ಚದಲ್ಲಿ ದ್ವಿಮುಖ ಸಂಪರ್ಕ ಸಾಧನಗಳನ್ನು ಅಳವಡಿಸಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
43.69 ಕೋಟಿ ರೂಗಳಲ್ಲಿ ಕೇಂದ್ರ ಸರ್ಕಾರದ ಪಾಲು 26.21 ಕೋಟಿ ರೂ., ರಾಜ್ಯ ಸರ್ಕಾರದ ಪಾಲು 17.48 ಕೋಟಿ ರೂ. ಗಳಾಗಿದೆ. ಈ ದ್ವಿಮುಖ ಸಂಪರ್ಕ ಸಾಧನಗಳನ್ನು ಅಳವಡಿಸಲು ಕೇಂದ್ರ ಸರ್ಕಾರದಿಂದ ಅನುಮೋದಿಸಲ್ಪಟ್ಟ ಇಸ್ರೋದ ವಾಣಿಜ್ಯ ಸಂಸ್ಥೆಯಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಮೂಲಕ ಅನುಷ್ಠಾನಗೊಳಿಸಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023- 24 ನೇ ಸಾಲಿನ ಬಜೆಟ್ ನಲ್ಲಿ ಮೀನುಗಾರರು ಮತ್ತು ಮೀನುಗಾರಿಕೆ ದೋಣಿಗಳ ಸುರಕ್ಷತೆಗಾಗಿ 17 ಕೋಟಿ ರೂಪಾಯಿ ಅನುದಾನದಲ್ಲಿ ಇಸ್ರೋ ಅಭಿವೃದ್ಧಿಪಡಿಸಿದ ಜಿಪಿಎಸ್ ಸಂವಹನ ವ್ಯವಸ್ಥೆಯನ್ನು ಎಲ್ಲಾ ಯಾಂತ್ರಿಕ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಲ್ಲಿ ಅಳವಡಿಸಲಾಗುವುದು. ಇದರಿಂದ ಆಳ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ದೋಣಿಗಳನ್ನು ಪತ್ತೆಹಚ್ಚಲು ಅನುಕೂಲವಾಗುತ್ತದೆ ಎಂದು ಪ್ರಸ್ತಾಪಿಸಿದ್ದರು. ಅಂತೆಯೇ ಮೀನುಗಾರಿಕೆ ದೋಣಿಗಳಿಗೆ ದ್ವಿಮುಖ ಸಂಪರ್ಕ ಸಾಧನ ಅಳವಡಿಸಲಾಗುವುದು.
