ಬೆಂಗಳೂರು: ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಯೂಟ್ಯೂಬರ್ ಸೂರ್ಯ ವಿರುದ್ಧ ದೂರು ದಾಖಲಾಗಿದೆ.
ಸಂತ್ರಸ್ತ ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ವಿ2 ಸೂರ್ಯ ವಿರುದ್ಧ ಪ್ರಕರಣ ದಾಖಲಾಗಿದೆ.
ದೇವಸ್ಥಾನವೊಂದರ ಬಳಿ ಯುವತಿಗೆ ಪರಿಚಯನಾಗಿದ್ದ ಯೂಟ್ಯೂಬರ್ ಸೂರ್ಯ, ಯುವತಿಯ ಸೋಷಿಯಲ್ ಮೀಡಿಯಾಗಳನ್ನು ಹ್ಯಾಕ್ ಮಾಡಿ ಖಾಸಗಿ ಫೋಟೋಗಳನ್ನು ಕದ್ದಿದ್ದ. ಬಳಿಕ ಫೋಟೋಗಳನ್ನು ಇಟ್ಟುಕೊಂಡು ಬೆದರಿಸುತ್ತಿದ್ದ. ಇದೇ ವಿಚಾರವಾಗಿ ಮಾತುಕತೆಗೆಂದು ಯುವತಿಯನ್ನು ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ಸಹಕರಿಸದಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಯುವತಿಯ ಮೊಬೈಲ್ ಕಿತ್ತುಕೊಂಡು ಒಡೆದು ಹಾಕಿದ್ದಾನೆ.
ಬಳಿಕ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಯುವತಿಯ ತಂದೆ-ತಾಯಿ ಕುಟುಂಬದವರಿಗೂ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ಯುವತಿ ದೂರು ನೀಡಿದ್ದಾರೆ. ಸೂರ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
