ಬೆಂಗಳೂರು: ರಾಜ್ಯದಲ್ಲಿ ಪೌತಿ ಖಾತೆ, ಪೋಡಿ ಕಾರ್ಯ ಪೂರ್ಣಗೊಳಿಸಲು ಡಿಸೆಂಬರ್ ಗಡುವು ನೀಡಲಾಗಿದೆ. ಎರಡೂ ಕಾರ್ಯಕ್ಕೆ ವೇಗ ನೀಡುವಂತೆ ತಹಸಿಲ್ದಾರ್ ಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಹಶೀದ್ಧಾರ್ ಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಈ ಕುರಿತಾಗಿ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಪೌತಿ ಖಾತೆ ಅಭಿಯಾನದಡಿ ಇದುವರೆಗೆ ಕೇವಲ ಶೇಕಡ 5ರಷ್ಟು ಗುರಿ ಸಾಧನೆ ಮಾಡಲಾಗಿದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮತ್ತು ಅತಿವೃಷ್ಟಿಯಿಂದ ಪೋಡಿ ದುರಸ್ತಿ ಕಾರ್ಯ ತಡವಾಗಿದೆ. ಹೀಗಾಗಿ ಎರಡೂ ಕಾರ್ಯಗಳಿಗೆ ವೇಗ ನೀಡಬೇಕು ಎಂದು ಹೇಳಿದ್ದಾರೆ.
41.62 ಲಕ್ಷ ಜಮೀನು ಮೃತರ ಹೆಸರಿನಲ್ಲಿವೆ. ಈ ಪೈಕಿ 2 ಲಕ್ಷ ಪ್ರಕರಣಗಳನ್ನು ಮಾತ್ರ ಇದುವರೆಗೆ ಮೃತ ವಾರಸುದಾರರಿಗೆ ಬದಲಾಯಿಸಲಾಗಿದೆ. ನಮ್ಮ ಗುರಿಯಲ್ಲಿ ಶೇಕಡ 5ರಷ್ಟು ಮಾತ್ರ ಕೆಲಸ ಆಗಿದೆ. ಕೂಡಲೇ ಅಭಿಯಾನಕ್ಕೆ ವೇಗ ನೀಡಬೇಕು ಎಂದು ಹೇಳಿದ್ದಾರೆ.
ಅದೇ ರೀತಿ ಪೋಡಿ ದುರಸ್ತಿ ಕಾರ್ಯವನ್ನು ಕೂಡ ಆದ್ಯತೆ ಮೇಲೆ ಕೈಗೊಂಡು ಡಿಸೆಂಬರ್ ಒಳಗೆ ಎಲ್ಲಾ ಪೂರ್ಣಗೊಳಿಸಬೇಕು. ದುರಸ್ತಿಕಾಗಿ 1.40 ಲಕ್ಷ ಪ್ರಕರಣ ಸರ್ವೆಗೆ ಹೋಗಿದೆ. 1.50 ಲಕ್ಷ ಪ್ರಕರಣ ಮಿಸ್ಸಿಂಗ್ ರೆಕಾರ್ಡ್ ಕಮಿಟಿಗೆ ಹೋಗಿದೆ. ತಹಶೀಲ್ದಾರರು ಈ ಪ್ರಕರಣಗಳನ್ನು ಪರಿಗಣಿಸಬೇಕು. ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಮುಗಿಯುವಂತೆ ಯೋಜನೆ ರೂಪಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
