ಬೆಂಗಳೂರು: ವಿದ್ಯುತ್ ಗುತ್ತಿಗೆದಾರರು, ವಿದ್ಯುತ್ ಗ್ರಾಹಕರ ವೇದಿಕೆಗಳು, ಕನ್ನಡಪರ ಸಂಘಟನೆಗಳು, ಕೈಗಾರಿಕೋದ್ಯಮಿಗಳ ಸಹಯೋಗದಲ್ಲಿ ರಾಜ್ಯ ವಿದ್ಯುತ್ ಗುತ್ತಿಗೆದಾರರು ಮತ್ತು ಗ್ರಾಹಕರ ಸಂಘ ಸೋಮವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ತಾತ್ಕಾಲಿಕ ಸಂಪರ್ಕ ಹೊಂದಿರುವ ಕಟ್ಟಡಗಳಿಗೆ ಒಸಿ, ಸಿಸಿ ವಿನಾಯಿತಿ ನೀಡುವುದು, ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿರುವ ಸ್ಮಾರ್ಟ್ ಮೀಟರ್ ದರ ಇಳಿಸುವುದು, ಒಂದು ಲಕ್ಷ ರೂ.ನಿಂದ 5 ಲಕ್ಷ ರೂಪಾಯಿವರೆಗಿನ ಕಾಮಗಾರಿಗಳ ತುಂಡುಗುತ್ತಿಗೆ ನೀಡುವುದು, ರೈತರ ಕೃಷಿ ನೀರಾವರಿ ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್ ಪೂರೈಕೆ, ಅಕ್ರಮ -ಸಕ್ರಮ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಕೈಗೊಳ್ಳಲಾಗಿದೆ.
ಬೆಸ್ಕಾಂ ಆನ್ಲೈನ್ ಪೋರ್ಟಲ್ ನಲ್ಲಿ ವಿದ್ಯುತ್ ಗುತ್ತಿಗೆದಾರರ ಸಮಾಪನ ವರದಿ ಕಡ್ಡಾಯಗೊಳಿಸಬೇಕು. ಪರವಾನಿಗೆ ಪಡೆದ ವಿದ್ಯುತ್ ಗುತ್ತಿಗೆದಾರರನ್ನು ಮಧ್ಯವರ್ತಿ ಪದ ತೆಗೆದು ವಿದ್ಯುತ್ ಗುತ್ತಿಗೆದಾರರು ಎಂದು ನಮೂದಿಸಬೇಕು. ಬೆಸ್ಕಾಂ, ಮೆಸ್ಕಾಂ, ಸೇರಿದಂತೆ ಎಸ್ಕಾಂ ಉಗ್ರಾಣಗಳಲ್ಲಿ ಲೈನ್ ಕಾಮಗಾರಿಗಳ ಸಾಮಗ್ರಿಗಳ ಕೊರತೆ ನೀಗಿಸಬೇಕು ಎಂದು ಒತ್ತಾಯಿಸಲಾಗಿದೆ.
