ಬೆಂಗಳೂರು: ಕೆಎಸ್ಆರ್ಟಿಸಿ ಆಡಳಿತಕ್ಕೆ ವೇಗ ನೀಡುವ ಉದ್ದೇಶದೊಂದಿಗೆ ಒಂದೇ ಶಾಖೆಯಲ್ಲಿ ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿವರೆಗೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳುವಂತೆ ಕೆಎಸ್ಆರ್ಟಿಸಿ ಎಂಡಿ ಅಕ್ರಮ್ ಪಾಷ ಅವರಿಗೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.
ಕೆಎಸ್ಆರ್ಟಿಸಿಯ ವಿಭಾಗಗಳು, ಘಟಕಗಳಲ್ಲಿ ಹಲವು ಸಿಬ್ಬಂದಿ ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ಆಡಳಿತದ ದೃಷ್ಟಿಯಿಂದ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಒಂದೇ ಶಾಖೆ ಅಥವಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕು.
ಇದರೊಂದಿಗೆ ನಿಗಮದಲ್ಲಿ ಚಾಲ್ತಿಯಲ್ಲಿರುವ ಸುತ್ತೋಲೆ, ನಿಯಮಗಳ ಪ್ರಕಾರ ಕ್ರಮ ಕೈಗೊಂಡು ಆಡಳಿತ ವರ್ಗವನ್ನು ಚುರುಕುಗೊಳಿಸಲು ಕ್ರಮ ವಹಿಸಬೇಕು. ಈ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
