ಬೆಂಗಳೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಎರಡು ಆನೆಗಳು ದುರಂತ ಅಂತ್ಯಕಂಡಿವೆ. ಕನಕಪುರ ಸುತ್ತಮುತ್ತಲ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಎರಡು ದಿನಗಳ ಹಿಂದೆ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಹಿಮ್ಮೆಟ್ಟಿಸಿದ್ದರು. ಈ ವೇಳೆ ಎರಡು ಆನೆಗಳು ಅರ್ಕಾವತಿ ನದಿ ದಾಟಲು ಹೋಗಿ ಸಾವನ್ನಪ್ಪಿವೆ.
ಅರ್ಕಾವತಿ ನದಿ ದಾಟುವಾಗ ಹಾರೊಬೆಲೆ ಹಿನ್ನೀರಿನಲ್ಲಿ ಎರಡು ಆನೆಗಳ ಕಾಲಿಗೆ ನದಿಯಲ್ಲಿ ಬೆಳೆದಿದ್ದ ಕಳೆಗಿಡ ಸಿಲುಕಿದೆ. ಕಾಲಿಸಿಗೆ ಸುತ್ತಿಕೊಂಡ ಪರಿಣಾಮ ಆನೆಗಳಿಗೆ ಮುಂದೆ ಹೋಗಲೂ ಆಗದೇ, ಹಿಂದೆ ಬರಲೂ ಆಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ.
ಬನ್ನೇರುಘಟ್ಟ ಅರಣ್ಯ ವಲಯದ 15-20 ವರ್ಷದ ಎರಡು ಕಾಡಾನೆಗಳು ಅರ್ಕಾವತಿ ನದಿಯಲ್ಲಿ ಮೃತಪಟ್ಟಿವೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
