ಧರ್ಮ, ಜಾತಿ ಎತ್ತಿ ಕಟ್ಟುವವರ ಜೊತೆ ಕೈ ಜೋಡಿಸಬೇಡಿ, ಸಮಾಜ ಘಾತುಕ ಶಕ್ತಿಗಳನ್ನು ದೂರ ಇಡಿ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಧರ್ಮ, ಜಾತಿಗಳನ್ನು ಎತ್ತಿ ಕಟ್ಟಿ, ಸಮಾಜವನ್ನು ಒಡೆಯುವವರ ಜೊತೆ ಕೈ ಜೋಡಿಸಬೇಡಿ, ಸಮಾಜ ಘಾತುಕ ಶಕ್ತಿಗಳನ್ನು ದೂರ ಇಡಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ “ದಾಸಶ್ರೇಷ್ಠ ಕನಕದಾಸ” ಜಯಂತಿಯನ್ನು ಉದ್ಘಾಟಿಸಿ, ಕನಕಶ್ರೀ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕನಕದಾಸರನ್ನು ಮಹಾಭಕ್ತರು ಎಂದು ಬಿಂಬಿಸುವ ಪ್ರಯತ್ನವನ್ನೇ ಈ ವರೆಗೆ ಮಾಡಲಾಗಿದೆ. ಅವರೊಬ್ಬ ಸಂತರು, ಕೃಷ್ಣನ ಭಕ್ತರು, ದಾಸ ಶ್ರೇಷ್ಠರು ಎನ್ನುವುದನ್ನೇ ಹೆಚ್ಚು ಬಿಂಬಿಸಲಾಗಿದೆ. ಕನಕದಾಸರು ಸಮಾಜ ಸುಧಾರಕರು, ದಾರ್ಶನಿಕರು, ಜಾತ್ಯತೀತ ಮನುಷ್ಯ, ಮಾನವತಾವಾದಿ, ವಿಶ್ವಮಾನವ ಎಂದು ಬಿಂಬಿಸಿರುವುದು ಬಹಳಾ ಕಡಿಮೆ ಎಂದರು.

1988ನೇ ಇಸವಿಯಲ್ಲಿ ಸರ್ಕಾರದ ವತಿಯಿಂದ ಕನಕದಾಸ ಜಯಂತಿಯನ್ನು ಆಚರಿಸಲು ಪ್ರಾರಂಭಿಸಲಾಯಿತು. ಅಲ್ಲಿಂದೀಚೆಗೆ ನಿರಂತರವಾಗಿ ಕನಕ ಜಯಂತಿಯನ್ನು ಆಚರಿಸಿಕೊಂಡು ಬಂದಿದ್ದೇವೆ. ಎಸ್.ಆರ್.ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಕನಕದಾಸರ ಸಮಾಜಮುಖಿ ಕೆಲಸಗಳನ್ನು ನಾಡಿನ ಜನತೆಗೆ ತಿಳಿಸಬೇಕೆಂದು ಸೂಚಿಸಿದ್ದ ಹಿನ್ನೆಲೆಯಲ್ಲಿ ಕನಕದಾಸರ ಕೃತಿಗಳಾದ ಮೋಹನ ತರಂಗಿಣಿ, ಹರಿಭಕ್ತಸಾರ, ನಳಚರಿತ್ರೆ ಮತ್ತು ರಾಮಧಾನ್ಯ ಚರಿತೆಗಳ ಕಿರುಹೊತ್ತಿಗೆ ಪ್ರಕಟಿಸಲಾಗಿತ್ತು ಎಂದರು.

ಕನಕದಾಸರು ಶೂದ್ರ ಜಾತಿಯಾದ ಕುರುಬ ಜಾತಿಯಲ್ಲಿ ಆಕಸ್ಮಿಕವಾಗಿ ಜನಿಸಿದರು. ಅವರು ಮಾಡಿರುವ ಕೆಲಸಗಳು ಜನರಿಗೆ ಪರಿಚಯಿಸಲೆಂದು ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬುದ್ಧ, ಬಸವ, ಮಹಾತ್ಮ ಗಾಂಧಿ ಅಂಬೇಡ್ಕರ್, ಕನಕದಾಸರ ಬಗ್ಗೆ ಜನರಿಗೆ ಸತ್ಯವನ್ನು ಹೇಳುವ ಪ್ರಯತ್ನ ಮಾಡಬೇಕು. ಕನಕದಾಸರು ಜಾತಿ ವ್ಯವಸ್ಥೆ ಹೋಗಲಾಡಿಸಲು, ಮೌಢ್ಯ, ಢಾಂಭಿಕತನ ಹೋಗಲಾಡಿಸಿ, ವೈಚಾರಿಕತೆ ಬೆಳೆಯಬೇಕು ಹಾಗೂ ಮನುಷ್ಯ ಸಮಾಜ ನಿರ್ಮಾಣವಾಗಬೇಕು ಎಂದು ಬಯಸಿದ್ದರು ಎಂದರು.

ಸಂವಿಧಾನದ ಆಶಯಗಳ ರೀತಿಯಲ್ಲಿ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಎಲ್ಲ ಸರ್ಕಾರಗಳ ಮೇಲಿದೆ. ಕನಕದಾಸರ ವಿಚಾರ, ಆದರ್ಶಗಳನ್ನು ಮುಂದಿಟ್ಟುಕೊಂಡು ಸಂವಿಧಾನದ ಆಶಯಗಳನ್ನು ಈಡೇರಿಸಬೇಕಾಗಿರುವುದು ಸರ್ಕಾರದ ಹೊಣೆ. ಜಾತಿ ವ್ಯವಸ್ಥೆ ಹೋಗಲಾಡಿಸಬೇಕೆಂದು ಮಹಾಪುರುಷರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಈ ವ್ಯಕ್ತಿಗಳು ಇಡೀ ದೇಶಕ್ಕೆ ಸಲ್ಲುವವರು. ಇವರಿಗೆ ಜಾತಿ ಇಲ್ಲ ಎಂದರು.

ದೇಶಕ್ಕೆ ಬಂದ ಸ್ವಾತಂತ್ರ್ಯ ಸಾರ್ಥಕವಾಗಲು ಎಲ್ಲಾ ಜನರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಬಲರಾಗಬೇಕು. ಆಗ ಮಾತ್ರ ಜಾತಿ ನಿರ್ಮೂಲನೆ ಸಾಧ್ಯ. ಇದಕ್ಕೆ ಸಮಾಜ ಸುಧಾರಣೆ ಆಗಬೇಕು. ಮಹಾನ್ ದಾರ್ಶನಿಕರಾದ ಕನಕದಾಸರೂ ಕೂಡ ಇದನ್ನೇ ಹೇಳಿರುವುದು. 2013ರಲ್ಲಿ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾದಾಗ ರಾಜ್ಯದ ಜನತೆಗೆ “ಭಾಗ್ಯ” ಯೋಜನೆಗಳನ್ನು ನೀಡಿ ಅಸಮಾನತೆ ತೊಡೆದು ಹಾಕಲು ಪ್ರಯತ್ನಿಸಿದೆ. ಈಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಗ್ಯಾರಂಟಿ ಯೋಜನೆಗಳ ಮೂಲಕ ಅಸಮಾನತೆ ತೊಡೆದು ಹಾಕಲು ಪ್ರಯತ್ನಿಸುತ್ತಿದ್ದೇನೆ ಎಂದರು.

ಹಿಂದುಳಿದ ಜಾತಿಯಲ್ಲಿ ಜನಿಸಿದ ಅನೇಕ ಮಹನೀಯರು ಮಹತ್ ಕಾವ್ಯಗಳನ್ನು ರಚಿಸಿದ್ದಾರೆ. ವಾಲ್ಮೀಕಿ ಮಹರ್ಷಿಗಳು ರಾಮಾಯಣ, ವ್ಯಾಸರು ಮಹಾಭಾರತ , ಕಾಳಿದಾಸರು ಶಾಕುಂತಲ ರಚನೆ , ಕನಕದಾಸರು ನಳ ಚರಿತ್ರೆ, ಮೋಹನ ತರಂಗಿಣಿ, ಹರಿಭಕ್ತಿಸಾರದಂತಹ ಕಾವ್ಯ ರಚನೆ ಮಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದರು. ಇದೆಲ್ಲ ವಿದ್ಯೆಯ ಮಹಿಮೆ. ಆದ್ದರಿಂದಲೇ ಸಮಾಜದ ಪ್ರತಿಯೊಬ್ಬರು ಶಿಕ್ಷಣ ಪಡೆಯಲೇಬೇಕು, ವಿಚಾರವಂತರಾಗಲೇಬೇಕು ಎಂದು ತಿಳಿಸಿದರು.

ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಯಾವುದೇ ಧರ್ಮವೂ ಮತ್ತೊಬ್ಬರನ್ನು, ಮತ್ತೊಂದು ಧರ್ಮವನ್ನು ದ್ವೇಷಿಸು ಎಂದು ಹೇಳಿಲ್ಲ. ಸಹಿಷ್ಣುತೆ, ಸಹಬಾಳ್ವೆ ಎರಡೂ ಮುಖ್ಯ. ಇದನ್ನು ಮನುಷ್ಯ ಕಲಿಯಬೇಕು. ಸಂವಿಧಾನದಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ.  ಧರ್ಮ, ಜಾತಿಗಳನ್ನು ಎತ್ತಿ ಕಟ್ಟಿ, ಸಮಾಜವನ್ನು ಒಡೆಯುವವರ ಜೊತೆ ಕೈ ಜೋಡಿಸಬೇಡಿ, ಸಮಾಜ ಘಾತುಕ ಶಕ್ತಿಗಳನ್ನು ದೂರ ಇಡಿ. ಪ್ರೀತಿ, ಸಹಬಾಳ್ವೆ, ಮನುಷ್ಯತ್ವ ಸಾರುವವರ ಮೇಲೆ  ನಂಬಿಕೆ ಇಡಿ, ಇದೇ ನಾವು ಕನಕದಾಸರಿಗಾಗಲಿ, ಬಸವಣ್ಣನವರಿಗಾಗಲಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗಾಗಲಿ ಸಲ್ಲಿಸುವ ಗೌರವ ಎಂದು ಹೇಳಿದರು.

ಕನಕದಾಸರು ಅಧಿಕಾರ, ಅಂತಸ್ತು ತ್ಯಾಗ ಮಾಡಿ ದಾಸಶ್ರೇಷ್ಠರಾದರು. ಸಮಾಜ ಸುಧಾರಣೆಯ ಹಲವು ಮಾರ್ಗಗಳನ್ನು ತೋರಿಸಿಕೊಟ್ಟರು. ಅವರ ಬೋಧನೆಗಳನ್ನು, ವಿಚಾರಧಾರೆಗಳನ್ನು ಪಾಲಿಸುವುದರಲ್ಲಿ ಜಯಂತಿ ಆಚರಣೆಯ ಸಾರ್ಥಕತೆ ಇದೆ. ಇಂತಹ ಎಲ್ಲ ಮಹಾನುಭಾವರ ಜಯಂತಿ ಆಚರಣೆಗಳನ್ನು ಸರ್ಕಾರ ಮಾಡುತ್ತಿರುವುದೂ ಕೂಡಾ ಅವರ ಆದರ್ಶಗಳನ್ನು ಪಾಲಿಸುವ ಉದ್ದೇಶದಿಂದ. ಇದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದ್ದಾರೆ.

ಕಾಗಿನೆಲೆ ಗುರುಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ಕನಕಶ್ರೀ ಪ್ರಶಸ್ತಿಯನ್ನು ಚಂದ್ರಕಾಂತ ಬಿಜ್ಜರಗಿ ಅವರಿಗೆ, ಕನಕ ಗೌರವ ಪ್ರಶಸ್ತಿಯನ್ನು- ಡಾ.ಅಕ್ಕಮಹಾದೇವಿ ಹಾಗೂ ಕನಕ ಯುವ ಪುರಸ್ಕಾರವನ್ನು ಡಾ.ರವೀಂದ್ರ ಲಂಜವಾಡಕರ್ ಅವರಿಗೆ ನೀಡಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read