ಬೆಂಗಳೂರು: ಕಬ್ಬು ಬೆಳೆಗೆ ಹೆಚ್ಚುವರಿಯಾಗಿ ಒಟ್ಟಾರೆ 100 ರೂಪಾಯಿ ನಿಗದಿ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಮೂಲಕ ಕಬ್ಬು ದರ ಹೆಚ್ಚಳದ ಬಗ್ಗೆ ಇದ್ದ ಎಲ್ಲಾ ಗೊಂದಲಗಳಿಗೂ ತೆರೆ ಎಳೆಯಲಾಗಿದೆ. ಎಷ್ಟೇ ರಿಕವರಿ ಇದ್ದರೂ ಟನ್ ಗೆ 100 ರೂಪಾಯಿ ನೀಡಲು ಆದೇಶಿಸಲಾಗಿದೆ. ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳೆಗಾರರ ಜೊತೆಗೆ ಶುಕ್ರವಾರ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ಸರ್ಕಾರದಿಂದ ರೂ.50, ಸಕ್ಕರೆ ಕಾರ್ಖಾನೆ ಮಾಲೀಕರಿಂದ 50 ರೂಪಾಯಿ ಹೆಚ್ಚುವರಿ ಹಣ ಪಾವತಿಗೆ ನಿರ್ಧರಿಸಲಾಗಿತ್ತು. ಶನಿವಾರ ಪ್ರತಿ ಟನ್ ಗೆ ಹೆಚ್ಚುವರಿ 100 ರೂಪಾಯಿ ಪಾವತಿಗೆ ಆದೇಶಿಸಲಾಗಿದೆ. ಬೆಳೆಗಾರರಿಗೆ ಮೊದಲ ಕಂತು ಪಾವತಿಗೆ 14 ದಿನಗಳ ಗಡುವು ನೀಡಲಾಗಿದೆ.
