ಜೈಪುರ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿಯೇ ಸೈನಿಕರೊಬ್ಬರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಬೆಡ್ ಶೀಟ್ ವಿಚಾರವಾಗಿ ರೈಲ್ವೆ ಸಿಬ್ಬಂದಿ ಹಾಗೂ ಸೈನಿಕನ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಕೋಚ್ ಅಟೆಂಡರ್ ಸೈನಿಕನನ್ನು ಕೊಲೆಗೈದಿದ್ದಾನೆ.
ಜಿಗರ್ ಚೌದರಿ ಕೊಲೆಯಾದ ಸೈನಿಕ. ಜಿಗರ್ ಚೌಧರಿ ರಜೆ ಮೇಲೆ ಗುಜರಾತ್ ನ ಸಬರಮತಿಯಲ್ಲಿರುವ ತನ್ನ ಮನೆಗೆ ಪ್ರಯಾಣಿಸುತ್ತಿದ್ದರು. ಪಂಜಾಬ್ ನ ಫಿರೋಜಾಬಾದ್ ರೈಲು ನಿಲ್ದಾಣದಲ್ಲಿ ಜಮ್ಮು-ಸಬರಮತಿ ಎಕ್ಸ್ ಪ್ರೆಸ್ ರೈಲು ಹತ್ತಿದ್ದ ಜಿಗರ್ ಚೌಧರಿ, ಸ್ಲೀಪರ್ ಕೋಚ್ ನಲ್ಲಿ ಪ್ರಯಾಣ ಬೆಳೆಸಿದ್ದರು. ಕೋಚ್ ಸಹಾಯಕರಿಂದ ಬ್ಲಾಂಕೆಟ್, ಬೆಡ್ ಶೀಟ್ ಕೇಳಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ರೈಲ್ವೆ ಸಿಬ್ಬಂದಿ ಸೈನಿಕನಿಗೆ ಚಾಕುವಿನಿಂದ ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಸೈನಿಕ ರೈಲಿನಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆರೋಪಿಯನ್ನು ಕೋಚ್ ಸಹಾಯಕ ಜುಬೈರ್ ಮೆಮನ್ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ, ಚಾಕು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವನ್ನು ನಿಸ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆದೇಶ ನೀಡಿದೆ.
