ಬೆಳಗಾವಿ: ಟನ್ ಕಬ್ಬಿಗೆ 3500 ರೂಪಾಯಿ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಬೆಳಗಾವಿಯ ಹತ್ತರಗಿ ಬಳಿ ರೈತರು ಉಗ್ರ ಸ್ವರೂಪದ ಹೋರಾಟ ನಡೆಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ದಿಢೀರ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ತರಗಿ ಬಳಿ ಹೆದ್ದರೈಯಲ್ಲಿ ಬೀಡು ಬಿಟ್ಟಿರುವ ಕಬ್ಬು ಬೆಳೆಗಾರರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ಎಚ್ಚರಿಸಿದ್ದರು. ಆದರೆ ಹೆದ್ದರೈ ಬಂದ್ ಮಾಡದಂತೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನಿಸಿದ್ದಾರೆ. ಆದರೂ ಬಗ್ಗದ ರೈತರು ದಿಢೀರ್ ಹೆದ್ದಾರಿ ಬಂದ್ ಮಾಡಿದ್ದಾರೆ. ಹತ್ತಾರು ಟ್ರ್ಯಾಕ್ಟರ್ ಗಳನ್ನು ರಸ್ತೆ ಮೇಲೆ ನಿಲ್ಲಿಸಿ ರಸ್ತೆ ಬಂದ್ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವುದರಿಂದ ಬಸ್ ಗಳು, ವಾಹನಗಳ ಸಂಚಾರ ಸ್ಥಗಿತಗೊಂಡಿದ್ದು, ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲು ಸಾಲಾಗಿ ನಿಂತಿವೆ. ಪ್ರಯಾಣಿಕರು ಪರದಾಡುವಂತಾಗಿದೆ.
