ಬೆಂಗಳೂರು: ನವೆಂಬರ್ 30 ರಂದು ನಡೆಯುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA) ಅಧ್ಯಕ್ಷ ಸ್ಥಾನಕ್ಕೆ ಬ್ರಿಜೇಶ್ ಪಟೇಲ್ ಬಣ ಅಚ್ಚರಿಯ ಅಭ್ಯರ್ಥಿ ಪ್ರಕಟಿಸಿದೆ.
ಹಿರಿಯ ಪತ್ರಿಕೋದ್ಯಮಿ ಕೆ. ಎನ್. ಶಾಂತಕುಮಾರ್ ಅವರು ಕೆ.ಎಸ್.ಸಿ.ಎ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ಹಿರಿಯ ಪತ್ರಿಕೋದ್ಯಮಿ ಕ್ರೀಡಾ ಅನುಭವಿ ಕೆ. ಎನ್. ಶಾಂತಕುಮಾರ್ ಅವರನ್ನು ಬ್ರಿಜೇಶ್ ಪಟೇಲ್ ಬಣ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿಸಿದೆ.
ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಮಾತೃ ಸಂಸ್ಥೆ ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾಗಿರುವ ಶಾಂತಕುಮಾರ್ ಅವರು ಬ್ರಿಜೇಶ್ ಪಟೇಲ್ ಬಣದ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರ ಸವಾಲು ಎದುರಿಸಲಿದ್ದಾರೆ.
ವೆಂಕಟೇಶ ಪ್ರಸಾದ್ ಬಣದಿಂದ ಮಾಜಿ ಕ್ರಿಕೆಟಿಗರಾದ ಸುಜಿತ್ ಸೋಮಸುಂದರ್, ಅವಿನಾಶ್ ವೈದ್ಯ, ಕಲ್ಪನಾ ವೆಂಕಟಾಚಾರ್ ಜೊತೆಗೆ ಸಂತೋಷ್ ಮೆನನ್, ಬಿ.ಎನ್. ಮಧುಕರ್, ಸುಧಾಕರ್, ಎನ್. ಯುವರಾಜ್ ಸ್ಪರ್ಧಿಸಲಿದ್ದಾರೆ. ದಿಗ್ಗಜ ಕ್ರಿಕೆಟಿಗರಾಗಿರುವ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ತಮಗೆ ಬೆಂಬಲ ಸೂಚಿಸಿದ್ದಾರೆ ಎಂದು ವೆಂಕಟೇಶ್ ಪ್ರಸಸಾದ್ ತಂಡ ತಿಳಿಸಿದೆ.
