ಬೆಂಗಳೂರು: ಕುಡುಕ ಪತಿಯ ಕಾಟಕ್ಕೆ ಬೇಸತ್ತು ವಿಚ್ಛೇದನ ಕೇಳಿದ್ದ ಪತ್ನಿಗೆ ಪತಿಯೇ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪತ್ನಿಯ ಖಾಸಗಿ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡಿ ಪತಿ ವಿಕೃತಿ ಮೆರೆದಿದ್ದಾನೆ. ಬೆಂಗಳೂರಿನ ಮಾಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಗೋವಿಂದರಾಜು ಎಂಬಾತನನ್ನು ಪ್ರೀತಿಸಿ 2024ರಲ್ಲಿ ವಿವಾಹವಾಗಿದ್ದರು. ಬರಬರುತ್ತಾ ಆನ್ ಲೈನ್ ಬೆಟ್ಟಿಂಗ್ ಹಾಗೂ ಕುಡಿತದ ದಾಸನಾಗಿದ್ದ ಗೋವಿಂದರಾಜು ಹಣಕಳೆದುಕೊಂಡು ಮನೆಗೆ ಬರುತ್ತಿದ್ದ. ಸಾಲದ್ದಕ್ಕೆ ಪತ್ನಿಗೆ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ.
ಇದರಿಂದಾಗಿ ಪತಿ-ಪತ್ನಿ ನಡುವೆ ಗಲಾಟೆ ಜಗಳವಾಗುತ್ತಿತ್ತು. ಪ್ರತಿದಿನ ಕುಡಿತ, ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡು ಮನೆಗೆ ಬರುತ್ತಿದ್ದ ಗೋವಿಂದ ರಾಜು ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ. ಪತಿಯ ಹಿಂಸೆಗೆ ಬೇಸತ್ತ ಪತ್ನಿ, ಆಂಧ್ರದಲ್ಲಿರುವ ತವರು ಮನೆಗೆ ತೆರಳಿದ್ದಳು. ಕೆಲ ದಿನಗಳ ಬಳಿಕ ಪತ್ನಿ ಗೋವಿಂದರಾಜುಗೆ ವಿಚ್ಛೇದನ ಕೇಳಿದ್ದಳು. ಇದರಿಂದ ಕೋಪಗೊಂಡ ಗೋವಿಂದರಾಜು ನಿನ್ನ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಹೇಳಿದ್ದಾನೆ. ಭಯಗೊಂಡ ಪತ್ನಿ ಬೆಂಗಳೂರಿಗೆ ವಾಪಾಸ್ ಆಗಿದ್ದಳು ಆದರೆ ಪಿಜಿಯಲ್ಲಿ ವಾಸವಾಗಿದ್ದಳು. ಆಕೆ ವಾಸವಾಗಿದ್ದ ಪಿಜಿಗೂ ಹೋಗಿ ಗಲಾಟೆ ಮಾಡಿದ್ದ ಗೋವಿಂದರಾಜು ತಾನು ನಿನ್ನ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಹಾಕಿದ್ದ.
ಬಳಿಕ ಪತ್ನಿಯ ಫೋಟೋ, ಖಾಸಗಿ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡಿದ್ದ. ಆಕೆಯ ಸ್ನೇಹಿತೆಯರ ಗುಂಪನ್ನು ಟ್ಯಾಗ್ ಮಾಡಿದ್ದ. ವಿಷಯ ತಿಳಿಯುತ್ತಿದ್ದಂತೆ ಪತ್ನಿ, ಪತಿಯ ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತಿ ಗೋವಿಂದರಾಜುನನ್ನು ಬಂಧಿಸಿದ್ದಾರೆ.
