ಬೆಂಗಳೂರು : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮೀಕ್ಷಾದಾರರಿಗೆ ತರಬೇತಿ ನೀಡಿರುವ ರಾಜ್ಯ ಮತ್ತು ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ಗಳಿಗೆ ಗೌರವಧನದ ಮೊತ್ತವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಏನಿದೆ ಅದೇಶದಲ್ಲಿ..?
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಉಲ್ಲೇಖ(1)ರ ಆದೇಶದನ್ವಯ ರಾಜ್ಯಾದ್ಯಂತ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳಲಾಗಿರುತ್ತದೆ.ಉಲ್ಲೇಖ (2)ರ ಆದೇಶದಲ್ಲಿ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.ಉಲ್ಲೇಖ (3)ರ ಆದೇಶದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವ ಸಮೀಕ್ಷಾದಾರರು ಮತ್ತು ಮೇಲ್ವಿಚಾರಕರಿಗೆ ತರಬೇತಿ ನೀಡುವ ರಾಜ್ಯ ಮತ್ತು ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ಳಿಗೆ ಈ ಕೆಳಕಂಡಂತೆ ಗೌರವಧನವನ್ನು ನಿಗದಿಪಡಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮೀಕ್ಷಾದಾರರು ಮತ್ತು ಮೇಲ್ವಿಚಾರಕರಿಗೆ ತರಬೇತಿ ನೀಡಿರುವ ರಾಜ್ಯ ಮಟ್ಟದ 168 ಮತ್ತು ಜಿಲ್ಲಾ ಮಟ್ಟದ 2,563 ಒಟ್ಟು 2,731 ಮಾಸ್ಟರ್ ಟ್ರೈನರ್ಸ್ ಗಳಿಗೆ ಅನುಕ್ರಮವಾಗಿ ತಲಾ ರೂ.7,500/- ಮತ್ತು ರೂ.5,000/- ಗಳಂತೆ ಅನುಬಂಧದಲ್ಲಿ ವಿವರಿಸಿರುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಒಟ್ಟು ರೂ.1,40,75,000 (ಒಂದು ಕೋಟಿ ನಲವತ್ತು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿಗಳು ಮಾತ್ರ) ಗಳನ್ನು ಜಿಲ್ಲಾಧಿಕಾರಿಗಳ ಪಿ.ಡಿಖಾತೆಗೆ ಈ ಕೆಳಕಂಡ ನಿಬಂಧನೆಗಳಿಗೆ ಒಳಪಟ್ಟು ಬಿಡುಗಡೆ ಮಾಡಿ ಆದೇಶಿಸಿದೆ.
- ಬಿಡುಗಡೆ ಮಾಡಿರುವ ಅನುದಾನವನ್ನು ಮಾಸ್ಟರ್ ಟ್ರೈನರ್ಸ್ ಗಳಿಗೆ ಗೌರವ ಧನ ಪಾವತಿಸಲು ಮಾತ್ರ ವಿನಿಯೋಗಿಸುವುದು.
- ಸಮೀಕ್ಷೆಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾಗುವ ಅನುದಾನ ಹಾಗೂ ವೆಚ್ಚದ ವಿವರಗಳನ್ನು ಪ್ರತ್ಯೇಕವಾಗಿ ನಿರ್ವಹಿಸುವುದು
- ನಿಯಮಾನುಸಾರ ವೆಚ್ಚಗಳನ್ನು ಭರಿಸಿದ ನಂತರ ಹಣ ವಿನಿಯೋಗ ಪ್ರಮಾಣ ಪತ್ರವನ್ನು ಆಯೋಗಕ್ಕೆ ಸಲ್ಲಿಸುವುದು.
ಈ ವೆಚ್ಚವನ್ನು ಆಯೋಗದ ಠೇವಣಿ ಖಾತೆ ಲೆಕ್ಕ ಶೀರ್ಷಿಕೆ ಸಂಖ್ಯೆ: 8449-00-120-0-18-677 ಹಾಗೂ ಠೇವಣಿ ಸಂಖ್ಯೆ: 26572A010 ಗೆ ಸಮೀಕ್ಷೆಯ ಉದ್ದೇಶಕ್ಕಾಗಿ ಬಿಡುಗಡೆಯಾಗಿರುವ ಅನುದಾನದಿಂದ ಭರಿಸುವುದು.




