ಶಿವಮೊಗ್ಗ: ಇಡ್ಲಿ ತಿನ್ನಲು ಬಂದಿದ್ದ ಗ್ರಾಹಕರೊಬ್ಬರು ಬಿಟ್ಟು ಹೋಗಿದ್ದ ಒಂದು ಲಕ್ಷ ರೂಪಾಯಿ ನಗದನ್ನು ಹಣ ಕಳೆದುಕೊಂಡ ವ್ಯಕ್ತಿಗೆ ವಾಪಸ್ ನೀಡುವ ಮೂಲಕ ತಿಂಡಿ ಗಾಡಿ ಮಾಲೀಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಶಿವಮೊಗ್ಗದ ಅಲ್ಕೋಳ ವೃತ್ತದಲ್ಲಿ ತಿಂಡಿ ಗಾಡಿ ಹೊಂದಿರುವ ತಿರುಮೂರ್ತಿ ಪ್ರಾಮಾಣಿಕತೆ ಮೆರೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ನೇಹಿತನಿಗೆ ಹಣ ಕೊಡಲು ಮಂಗಳವಾರ ರಾತ್ರಿ ಸೊರಬ ತಾಲೂಕು ಆನವಟ್ಟಿಯಿಂದ ಮಧುಕೇಶವ ಶಿವಮೊಗ್ಗಕ್ಕೆ ಬಂದಿದ್ದಾರೆ. ರಾತ್ರಿ 9 ಗಂಟೆ ವೇಳೆಗೆ ಆಲ್ಕೊಳ ವೃತ್ತದಲ್ಲಿ ಇಡ್ಲಿ ತಿಂದ ಅವರು ತಂದಿದ್ದ ಹಣ ಅಲ್ಲೇ ಬಿಟ್ಟು ಹೋಗಿದ್ದಾರೆ.
ಮಧುಕೇಶವ ಮರೆತು ಒಂದು ಲಕ್ಷ ರೂ. ಬಿಟ್ಟು ಹೋಗಿದ್ದು, ತಿರುಮೂರ್ತಿ ಕವರ್ ಗಮನಿಸಿದಾಗ ಹಣ ಇರುವುದು ಗೊತ್ತಾಗಿದೆ. ನಂತರ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಣಿಯವರೊಂದಿಗೆ ತುಂಗಾ ನಗರ ಪೊಲೀಸ್ ಠಾಣೆಗೆ ತೆರಳಿದ ತಿರುಮೂರ್ತಿ ಅವರು ಇನ್ಸ್ಪೆಕ್ಟರ್ ಕೆ.ಟಿ. ಗುರುರಾಜ್ ಅವರಿಗೆ ಮಾಹಿತಿ ನೀಡಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿಯನ್ನು ಪತ್ತೆ ಮಾಡಿ ಠಾಣೆಗೆ ಕರೆಸಿದ ಗುರುರಾಜ್ ಅವರು ಅಗತ್ಯ ಮಾಹಿತಿ ಪಡೆದುಕೊಂಡು ತಿರುಮೂರ್ತಿ ಅವರ ಮೂಲಕವೇ ಹಣ ವಾಪಸ್ ಕೊಡಿಸಿದ್ದಾರೆ. ತಿಂಡಿ ಗಾಡಿ ವ್ಯಾಪಾರಿ ತಿರುಮೂರ್ತಿ ಅವರ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತವಾಗಿದೆ.
