ಬೆಂಗಳೂರು: ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘದಡಿ ಯೋಜನೆಯ ಫಲಾನುಭವಿಗಳಿಗೆ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮೂರು ಮಹತ್ವದ ಕಾರ್ಯಕ್ರಮಗಳ ಸಿದ್ಧತೆಯ ರಾಜ್ಯಮಟ್ಟದ ಪೂರ್ವಭಾವಿ ಸಭೆ ಚಾಲನೆ ನೀಡಿದ ಸಚಿವರು ಮಾತನಾಡಿದರು.
ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘದ ಯೋಜನೆ ಫಲಾನುಭವಿಗಳಿಗೆ ಸ್ವಂತ ಉದ್ಯೋಗ, ವ್ಯವಹಾರ ಚಟುವಟಿಕೆಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 3 ಲಕ್ಷ ರೂ ವರೆಗೆ ಸಾಲ ಸೌಲಭ್ಯ ನೀಡಲಾಗುವುದು. ಗೃಹಲಕ್ಷ್ಮಿ ಸೊಸೈಟಿ, ಅಕ್ಕಪಡೆ ಲೋಕಾರ್ಪಣೆ, ಸಮಗ್ರ ಶಿಶು ವಿಕಾಸ ಯೋಜನೆಯ ಸುವರ್ಣ ಮಹೋತ್ಸವ ಸಿದ್ಧತೆಗೆ ರಾಜ್ಯಮಟ್ಟದ ಪೂರ್ವಭಾವಿ ಸಭೆಗೆ ಚಾಲನೆ ನೀಡಲಾಗಿದೆ. ಗೃಹಲಕ್ಷ್ಮಿ ಫಲಾನುಭವಿಗಳಿಗೆ ಲಾಭ ತಂದು ಕೊಡುವ ಸಲುವಾಗಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಆರಂಭಿಸಲಾಗುವುದು ಎಂದರು.
ಎರಡು ಸಾವಿರ ಫಲಾನುಭವಿಗಳಿಂದ ಹಣ ಸಂಗ್ರಹಿಸಲಾಗಿದೆ. ಗೃಹಲಕ್ಷ್ಮಿ ಯೋಜನೆ ಮಾದರಿಯಲ್ಲೇ ಗೃಹಲಕ್ಷ್ಮಿ ಸೊಸೈಟಿ ಕೂಡ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳು ಶ್ರಮ ವಹಿಸಬೇಕು. ಇನ್ನು ಮೂರು ತಿಂಗಳಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಗೃಹಲಕ್ಷ್ಮಿ ಸೊಸೈಟಿ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಸುರಕ್ಷತೆ ನೀಡುವ ಉದ್ದೇಶದಿಂದ ಅಕ್ಕಪಡೆ ಆರಂಭಿಸಲಾಗುವುದು. ಹೋಂ ಗಾರ್ಡ್, ಎನ್.ಸಿ.ಸಿ. ವಿದ್ಯಾರ್ಥಿಗಳು ಅಕ್ಕ ಪಡೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಶಾಲಾ, ಕಾಲೇಜು, ಪಾರ್ಕ್, ಶಾಪಿಂಗ್ ಮಾಲ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಅಕ್ಕ ಪಡೆ ಗಸ್ತು ತಿರುಗಲಿದೆ. ಪೊಲೀಸ್ ಇಲಾಖೆ ಸಹಕಾರದೊಂದಿಗೆ ಅಕ್ಕ ಪಡೆ ಕಾರ್ಯನಿರ್ವಹಿಸಲಿದೆ ಎಂದರು.
ಸಮಗ್ರ ಶಿಶು ವಿಕಾಸ ಯೋಜನೆಗೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನವೆಂಬರ್ 19ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸುವರ್ಣ ಮಹೋತ್ಸವ ಸಮಾರಂಭ ಏರ್ಪಡಿಸಲಾಗಿದ್ದು, 40,000ಕ್ಕೂ ಹೆಚ್ಚು ಮಹಿಳೆಯರು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
