ನವದೆಹಲಿ: ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹೀಗೆ ಮಾಡದಿದ್ದಲ್ಲಿ ಜನವರಿ 1ರಿಂದ ಪ್ಯಾನ್ ಕಾರ್ಡ್ ಅನೂರ್ಜಿತವಾಗಲಿದೆ.
ಪ್ಯಾನ್ ಗೆ ಆಧಾರ್ ಲಿಂಕ್ ಮಾಡಲು ಡಿಸೆಂಬರ್ 31ರವರೆಗೆ ಅವಕಾಶ ನೀಡಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ತಿಳಿಸಿದೆ. ಡಿಸೆಂಬರ್ 31ರ ನಂತರ ಪ್ಯಾನ್ ಗೆ ಆಧಾರ್ ಜೋಡಣೆ ಮಾಡಿದಲ್ಲಿ 1000 ರೂ. ದಂಡ ಪಾವತಿಸಬೇಕಾಗುತ್ತದೆ.
ಪರ್ಮನೆಂಟ್ ಅಕೌಂಟ್ ನಂಬರ್(ಪ್ಯಾನ್) ಎಂಬುದು ಪ್ರತಿ ವ್ಯಕ್ತಿಗೆ ಆದಾಯ ತೆರಿಗೆ ಇಲಾಖೆ ನೀಡುವ ಗುರುತಿನ ಸಂಖ್ಯೆಯಾಗಿದೆ. ಇದನ್ನು ತೆರಿಗೆ ಉದ್ದೇಶಕ್ಕಾಗಿ ನೀಡಲಾಗುವುದು. ಬ್ಯಾಂಕು ಖಾತೆಗಳನ್ನು ತೆರೆಯುವುದರಿಂದ ಹಿಡಿದು ದೊಡ್ಡ ಮೊತ್ತದ ನಗದು ವರ್ಗಾವಣೆವರೆಗೆ ಹಣಕಾಸು ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.
ಪ್ಯಾನ್ ಕಾರ್ಡ್ ಇಲ್ಲದಿದ್ದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸಲು ಆಗುವುದಿಲ್ಲ. ಹೊಸ ಖಾತೆ ತೆರೆಯಲು ಆಗುವುದಿಲ್ಲ. ಟ್ಯಾಕ್ಸ್ ರೀಫಂಡ್ ಕೂಡ ಆಗುವುದಿಲ್ಲ. ಷೇರುಪೇಟೆ, ಮ್ಯೂಚುಯಲ್ ಫಂಡ್ ವ್ಯವಹಾರಗಳಿಗೆ ತೊಂದರೆಯಾಗುತ್ತದೆ.
ಹೀಗಾಗಿ ಆದಾಯ ತೆರಿಗೆ ಇಲಾಖೆ ವೆಬ್ಸೈಟ್ ನಲ್ಲಿ ಲಿಂಕ್ ಪ್ರಕ್ರಿಯೆಯೊಂದಿಗೆ ಪ್ಯಾನ್ ಗೆ ಆಧಾರ್ ಲಿಂಕ್ ಮಾಡಿಕೊಳ್ಳಬಹುದಾಗಿದೆ ಎನ್ನಲಾಗಿದೆ.
