ಬೆಂಗಳೂರು: ಸ್ವಸಹಾಯ ಗುಂಪುಗಳ ಡಿಜಿಟಲ್ ಸಾಮರ್ಥ್ಯ ಹೆಚ್ಚಿಸಲು ಅಂತಾರಾಷ್ಟ್ರೀಯ ಖ್ಯಾತಿಯ ‘ವಾಲ್ಮಾರ್ಟ್’ ಜೊತೆ ಮಹತ್ವದ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಹೊಸ ಮಾರುಕಟ್ಟೆಗಳಿಗೆ ಅವಕಾಶ ದೊರೆಯಲಿದೆ.
ವಿರಾರು ಮಹಿಳೆಯರಿಗೆ ಉತ್ತಮ ಆದಾಯ ಸಿಗಲಿದೆ. ಸ್ವಸಹಾಯ ಗುಂಪುಗಳಿಗೆ ಡಿಜಿಟಲ್ ವ್ಯವಸ್ಥೆ, ಇ – ಕಾಮರ್ಸ್ ಮತ್ತು ಮಾರ್ಕೆಟಿಂಗ್ ಹಾಗೂ ಇತರೆ ಸಾಮರ್ಥ್ಯಗಳಲ್ಲಿ ವಿಶೇಷ ತರಬೇತಿಯೂ ದೊರೆಯಲಿದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ರಾಜ್ಯಾದ್ಯಂತ ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳಿಗೆ ಇನ್ನು ಮುಂದೆ ಜಾಗತಿಕ ಮಾರುಕಟ್ಟೆಯಲ್ಲಿಯೂ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುವ ಮತ್ತು ಮಾರಾಟ ಮಾಡುವ ಅವಕಾಶ ದೊರೆಯಲಿದೆ.
ಈ ಒಪ್ಪಂದದ ಅವಧಿ ಮೂರು ವರ್ಷಗಳಾಗಿರುತ್ತದೆ. ವಾಲ್ಮಾರ್ಟ್ ವೃದ್ಧಿಯ ಅನುಷ್ಠಾನ ಪಾಲುದಾರರಾದ “ಐಡಿಯಾಸ್ ಟು ಇಂಪ್ಯಾಕ್ಟ್” ಫೌಂಡೇಶನ್ ಮೂಲಕ ಸ್ವಸಹಾಯ ಗುಂಪುಗಳಿಗೆ ಉಚಿತ ಡಿಜಿಟಲ್ ಕಲಿಕೆ ತರಬೇತಿ, ವ್ಯಾಪಾರ ಪರಿಕರ ಮತ್ತು ಮಾರ್ಗದರ್ಶನ ದೊರೆಯಲಿದೆ. ಫ್ಲಿಪ್ಕಾರ್ಟ್ ಮತ್ತು ವಾಲ್ಮಾರ್ಟ್ ಸಂಸ್ಥೆಯ ಮಾರುಕಟ್ಟೆ ಜೊತೆ ಇ – ಕಾಮರ್ಸ್ ಸಂಪರ್ಕವನ್ನು ಸಾಧಿಸಲು ಈ ಒಪ್ಪಂದ ಅವಕಾಶ ಕಲ್ಪಿಸುತ್ತಿದೆ. ಸ್ವಸಹಾಯ ಗುಂಪುಗಳಿಗೆ ಡಿಜಿಟಲ್ ವ್ಯವಸ್ಥೆ, ಇ-ಕಾಮರ್ಸ್, ಮಾರ್ಕೆಟಿಂಗ್ ಮತ್ತು ಇತರ ಸಾಮರ್ಥ್ಯಗಳಲ್ಲಿ ವಿಶೇಷ ತರಬೇತಿ ದೊರೆಯಲಿದೆ.
