ವಿಚಾರಣೆ ನೆಪದಲ್ಲಿ ಮಹಿಳೆ ಮೇಲೆ ಹಲ್ಲೆ: ಮೂವರು ಪೊಲೀಸರು ಅಮಾನತು

ಬೆಂಗಳೂರು: ಕಳ್ಳತನ ಆರೋಪದಡಿ ವಿಚಾರಣೆ ನೆಪದಲ್ಲಿ ಮನೆ ಕೆಲಸದ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆತಂದು ಗಂಭೀರವಾಗಿ ಹಲ್ಲೆ ಮಾಡಿದ ಆರೋಪದಡಿ ವರ್ತೂರು ಪೋಲೀಸ್ ಠಾಣೆಯ ಮೂವರು ಕ್ರೈಂ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ವರ್ತೂರು ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿಯಾದ ಸಂಜಯ್ ರಾಥೋಡ್, ಸಂತೋಷ್ ಕುದರಿ ಮತ್ತು ಅರ್ಚನಾ ಅಮಾನತುಗೊಂಡವರು. ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಕೆ. ಪರಶುರಾಮ್ ಆದೇಶಿಸಿದ್ದಾರೆ. ಮಾರತಹಳ್ಳಿ ಉಪ ವಿಭಾಗದ ಎಸಿಪಿ ನೀಡಿದ ವರದಿ ಆಧರಿಸಿ ಈ ಮೂವರು ಕ್ರೈಂ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಮೇಲ್ವಿಚಾರಣೆ ನಡೆಸುವಲ್ಲಿ ವಿಫಲರಾದ ಪಿಎಸ್ಐ ಮೌನೇಶ್ ದೊಡ್ಡಮನಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ವರದಿ ನೀಡಲು ವೈಟ್ ಫೀಲ್ಡ್ ಡಿಸಿಪಿಗೆ ಪತ್ರ ಬರೆದಿದ್ದರು. ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಅಪಾರ್ಟ್ಮೆಂಟ್ ನಿವಾಸಿ ಪ್ರಿಯಾಂಕಾ ಜನವಾಲ್ ಅವರು ಅಕ್ಟೋಬರ್ 30ರಂದು ತಮ್ಮ ಮನೆಯಲ್ಲಿ ಡೈಮಂಡ್ ರಿಂಗ್ ಕಳ್ಳತನವಾದ ಬಗ್ಗೆ ವರ್ತೂರು ಪೊಲೀಸರಿಗೆ ದೂರು ನೀಡಿದ್ದರು. ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ 34 ವರ್ಷದ ಮಹಿಳೆ ಕಳ್ಳತನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ವರ್ತೂರು ಠಾಣೆಯ ಪಿಎಸ್ಐ ಮೌನೇಶ್ ದೊಡ್ಡಮನಿ ಎನ್.ಸಿ.ಆರ್. ದಾಖಲಿಸಿ ಠಾಣೆಯಿಂದ ಹೊರಗೆ ಹೋಗಿದ್ದರು. ಮಾರನೇ ದಿನ ಕ್ರೈಂ ಸಿಬ್ಬಂದಿ ಸಂಜಯ್ ರಾಥೋಡ್, ಸಂತೋಷ ಕುದರಿ ಮತ್ತು ಅರ್ಚನಾ ಆರೋಪಿತ ಮಹಿಳೆಯನ್ನು ಠಾಣೆಗೆ ಕರೆತಂದು ಗಂಭೀರವಾಗಿ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಮಹಿಳೆಯ ಕೈಕಾಲು, ಬೆನ್ನು ಸೇರಿ ಖಾಸಗಿ ಅಂಗಗಳಿಗೆ ತೀವ್ರ ಹಾನಿಯಾಗಿತ್ತು. ಮಹಿಳೆ ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಹಲ್ಲೆಯ ಭೀಕರತೆ ಬಗ್ಗೆ ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read