ಬೆಂಗಳೂರು: ಖಾಸಗಿ ಭೂಮಿಯಲ್ಲಿ ಅನುಮತಿ ಇಲ್ಲದೆ ಶವ ಹೂಳಬಹುದೇ ಎಂಬ ಸರ್ಕಾರದ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ ನೀಡಿದೆ.
ತಮ್ಮ ಒಪ್ಪಿಗೆ ಇಲ್ಲದೆ ಸೊಸೆಯ ಶವವನ್ನು ಮನೆಯ ಬಳಿ ಹೂಳಲಾಗಿದೆ. ಶವ ಬೇರೆಡೆಗೆ ಸ್ಥಳಾಂತರಿಸುವಂತೆ ನಿರ್ದೇಶನ ಕೋರಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಬಂಗಾರಪೇಟೆಯ ಹೆಚ್. ಗೋಪಾಲಗೌಡ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ವೈವಾಹಿಕ ಭಿನ್ನಾಭಿಪ್ರಾಯದಿಂದ ಸೊಸೆ ತವರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ತಮ್ಮ ಮನೆಯ ಬಳಿ ಶವ ಹೂತು ಹಾಕಿದ್ದಾರೆ. ತಮ್ಮ ಒಪ್ಪಿಗೆ ಇಲ್ಲದೆ ಅಕ್ರಮವಾಗಿ ಪ್ರವೇಶಿಸಿ ಸಮಾಧಿ ನಿರ್ಮಾಣ ಮಾಡಿದ್ದಾರೆ. ಸಮಾಧಿ ತೆರವಿಗೆ ಅರ್ಜಿ ಸಲ್ಲಿಸಿದ್ದರೂ ಎಸಿ ತಿರಸ್ಕರಿಸಿದ್ದಾರೆ. ಹೀಗಾಗಿ ಎಸಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ, ಖಾಸಗಿ ಭೂಮಿಯಲ್ಲಿ ಶವ ಹೂಳಲು ಯಾವುದೇ ಅನುಮತಿ ಬೇಕಿದೆಯೇ? ಸಮಾಧಿ ನಿರ್ಮಾಣಕ್ಕೆ ಮೊದಲು ಭೂಮಾಲೀಕರ ಒಪ್ಪಿಗೆ ಪಡೆಯುವುದು ಅಗತ್ಯವೇ ಎನ್ನುವ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಆಕ್ಷೇಪಣೆ ಇರುವ ವ್ಯಕ್ತಿಯ ಆಸ್ತಿಯಲ್ಲಿ ಶವಸಂಸ್ಕಾರ ಸಾಧ್ಯವಿಲ್ಲ. ಒಪ್ಪಿಗೆ ನೀಡಿದರೆ ಆಗಬಹುದು, ಒಪ್ಪಿಗೆ ನೀಡಿದ್ದರೂ ಯಾವುದೇ ಅನುಮತಿ ಇಲ್ಲದೆ ಶವ ಹೂಳಲು ಸರ್ಕಾರ ಅವಕಾಶ ನೀಡಬಹುದೇ? ಇದೊಂದು ಅಪಾಯಕಾರಿ ನಿದರ್ಶನವಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
