ದಾವಣಗೆರೆ: ಪೊಲೀಸರಿಂದ ಹಲ್ಲೆಗೊಳಗಾದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನೇಣು ಹಾಕಿಕೊಂಡು ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಸಂತೆಬೆನ್ನೂರು ಸಮೀಪದ ಚಿಕ್ಕಬೆನ್ನೂರಿನಲ್ಲಿ ನಡೆದಿದೆ.
24 ವರ್ಷದ ಕಿರಣ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕ. ಕಳ್ಳತನ ಪ್ರಕರಣವೊಂದರ ವಿಚಾರಣೆಗಾಗಿ ಆತನನ್ನು ಪೊಲೀಸರು ಅಕ್ಟೋಬರ್ 27 ರಂದು ಠಾಣೆಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರ ಹಿಂಸೆಯಿಂದ ಬೇಸತ್ತು ಕಿರಣ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸಂತೆಬೆನ್ನೂರು ಪೊಲೀಸರ ವಿರುದ್ಧ ಆತನ ಕುಟುಂಬದವರು ಆರೋಪಿಸಿದ್ದಾರೆ.
