ಬೆಂಗಳೂರು: ರಸ್ತೆಬದಿ, ಖಾಲಿ ಜಾಗದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವವರ ಮನೆ ಮುಂದೆಯೇ ಕಸ ಸುರಿಯುವ ಹಬ್ಬ ಅಭಿಯಾನ ಆರಂಭಿಸಿರುವ ಜಿಬಿಎ ಅಧಿಕಾರಿಗಳ ವಿರುದ್ಧ ಸರವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಏರಿಯಾಗಳಿಗೆ ಕಸದ ವಾಹನಗಳೇ ಬರುತ್ತಿಲ್ಲ. ಮನೆಯಲ್ಲಿ ಕಸ ಸಂಗ್ರಹಿಸಿ, ಸಂಗ್ರಹಿಸಿ ಇಟ್ಟುಕೊಂಡು ವಾರ, 15 ದಿನಗಳಾದರೂ ಕಸ ತೆಗೆದುಕೊಂಡು ಹೋಗಲು ಯಾರೂ ಬರುತ್ತಿಲ್ಲ ಎಷ್ಟು ಎಂದು ಕಾಯುವುದು ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರುನ ಲಗ್ಗೆರೆಯ ನಿವಾಸಿಗಳು ತಮ್ಮ ಮನೆಗಳ ಮುಂದೆ ಕಸದ ಡಬ್ಬಿಗಳನ್ನು ಇಟ್ಟು ಕೊಂಡು ಕಾಯುತ್ತಿದ್ದಾರೆ. ಕಳೆದ ಒಂದು ವಾರದಿಂದ ಇಲ್ಲಿಗೆ ಯಾವುದೇ ಕಸದ ವಾಹನ ಬಂದಿಲ್ಲ. ಹಾಗೊಂದುವೇಳೆ ಬಂದರೆ ಕಸ ಎತ್ತಿಹಾಕಲೂ ಹಣ ಕೇಳುತ್ತಾರೆ. ನಾವು ಎಲ್ಲಿ ಕಸ ಹಾಕಬೇಕು? ಮನೆಗಳ ಮುಂದೆ ಎಷ್ಟು ದಿನ ಎಂದು ಕಸದ ಡಬ್ಬಿಗಳನ್ನು ಇಟ್ಟುಕೊಂಡು ಕಾಯಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಕಸಗಳನ್ನು ತಂದು ಮನೆಗಳ ಮುಂದೆ ಸುರಿದು ಬುದ್ಧಿ ಕಲಿಸುವುದಾಗಿ ಹೇಳುತ್ತಿದ್ದಾರೆ. ಅಧಿಕಾರಿಗಳು ಇಲ್ಲಿಗೆ ಬಂದು ನೋಡಲಿ, ಅಧಿಕಾರಿಗಳ ತಲೆ ಮೇಲೆ ಕಸ ಸುರಿಯುತ್ತೇವೆ ಎಂದು ನಿವಾಸಿಗಳು ಕಿಡಿಕಾರಿದ್ದಾರೆ.
ಇದು ಕೇವಲ ಲಗ್ಗೆರೆ ಮಾತ್ರವಲ್ಲ ಬೆಂಗಳೂರಿನ ಹಲವು ಪ್ರತಿಷ್ಠಿತ ಏರಿಯಾ, ಬಡಾವಣೆಗಳಿಗೂ ಕಸದ ವಾಹನ ನಾಲ್ಕುದಿನ, ವಾರಕ್ಕೊಮ್ಮೆ ಬರುತ್ತದೆ. ಹೀಗೆ ಬಂದ ವಾಹನಗಳು ರಸ್ತೆ ತುದಿಯಲ್ಲಿಯೋ , ಎಲ್ಲೋ ಒಂದು ಕಡೆ ನಿಂತು ವಿಸಿಲ್ ಹಾಕುತ್ತಾರೆ. ಕಸದ ಡಬ್ಬಿ ಎತ್ತಿಕೊಂಡು ಹೋಗುವಷ್ಟರಲ್ಲಿ ಕಸದ ವಾಹನ ಹೊರಟೇ ಹೋಗುತ್ತದೆ. ಇದು ಹಲವು ನಿವಾಸಿಗಳ ಪ್ರತಿದಿನದ ಗೋಳು. ದೂರು ನೀಡರೂ ಯಾವುದೇ ಪ್ರಯೋಜನವಿಲ್ಲ. ಕಸದ ವಾಹನಗಳೇ ಸರಿಯಾಗಿ ಬರದಿದ್ದಾಗ ಕಸ ಎಲ್ಲಿ ಹಾಕಬೇಕು ಎಂಬುದು ನಿವಾಸಿಗಳ ಅಳಲು.
