ಚಿತ್ರದುರ್ಗ: ಅಜ್ಜನನ್ನು ಕೊಲೆ ಮಾಡಿದ ಮೊಮ್ಮಗನಿಗೆ ಚಿತ್ರದುರ್ಗದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರೋಣ ವಾಸುದೇವ ಅವರು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಎಸ್. ಚಿತ್ರಲಿಂಗಪ್ಪ ಶಿಕ್ಷೆಗೆ ಒಳಗಾದ ವ್ಯಕ್ತಿ.
ತಮ್ಮ ಅಜ್ಜ ಈಶ್ವರಪ್ಪ ಅವರ ಬಳಿ 3 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದ ಚಿತ್ರಲಿಂಗಪ್ಪ ಇದರಲ್ಲಿ 75,000 ರೂ. ವಾಪಸ್ ನೀಡಿದ್ದರು.
ಚಿತ್ರಹಳ್ಳಿಯ ಪೆಟ್ರೋಲ್ ಬಂಕ್ ಸಮೀಪ ರಸ್ತೆ ಬದಿಯಲ್ಲಿದ್ದ ಒಂದೂವರೆ ಎಕರೆ ಜಮೀನನ್ನು ಈಶ್ವರಪ್ಪ ಕಡಿಮೆ ಬೆಲೆಗೆ ಮಾರಾಟ ಮಾಡಿಸಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಗಲಾಟೆಯ ವೇಳೆ ಸಾಲವಾಗಿ ಪಡೆದಿದ್ದ ಬಾಕಿ ಹಣ ಕೊಡುವಂತೆ ಈಶ್ವರಪ್ಪ ಕೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಚಿತ್ರ ಲಿಂಗಪ್ಪ ಅಜ್ಜನನ್ನು ಕೊಲೆ ಮಾಡಿದ್ದಾನೆ.
2022ರ ಜುಲೈ 9ರಂದು ಅರಸನಘಟ್ಟ ಗ್ರಾಮದ ಸಮೀಪ ಹನುಮಂತ ದೇವರ ಕಣಿವೆಯ ಬಳಿಗೆ ಕರೆದುಕೊಂಡು ಹೋಗಿ ಅಜ್ಜನನ್ನು ಕೊಲೆ ಮಾಡಿದ್ದ ಬಗ್ಗೆ ಪ್ರಕರಣ ದಾಖಲಾಗಿದ್ದು, ಸಿಪಿಐ ಕೆ.ಎನ್. ರವೀಶ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಪರಾಧಿ ಚಿತ್ರಲಿಂಗಪ್ಪನಿಗೆ ಜೀವಾವಧಿ ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
