ನವದೆಹಲಿ: ಇನ್ನು ಮುಂದೆ ಅನಾಮಿಕ ಫೋನ್ ಕಾಲ್ ಗೆ ತೆರೆ ಬೀಳಲಿದೆ. ಕರೆ ಮಾಡುವವರ ಹೆಸರು ಗೋಚರವಾಗುವ ಹೊಸ ವ್ಯವಸ್ಥೆಗೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಒಪ್ಪಿಗೆ ನೀಡಿದೆ.
ಯಾವುದೇ ಮೊಬೈಲ್ ಸಂಖ್ಯೆಗೆ ಅಪರಿಚಿತ ನಂಬರ್ ಗಳಿಂದ ಕರೆ ಬಂದರೂ ಕರೆ ಮಾಡಿದವರ ನೈಜ ಹೆಸರು ಗೋಚರವಾಗುತ್ತದೆ. ಪ್ರಸ್ತುತ ಇಂತಹ ಸೌಲಭ್ಯಕ್ಕಾಗಿ ‘ಟ್ರೂ ಕಾಲರ್’ ನಂತಹ ಥರ್ಡ್ ಪಾರ್ಟಿ ಆ್ಯಪ್ ಹೊಂದಿರಬೇಕು. ಆದರೆ, ಸದ್ಯದಲ್ಲಿಯೇ ದೂರ ಸಂಪರ್ಕ ಇಲಾಖೆಯ ‘ಕಾಲರ್ ಐಡಿ’ ವ್ಯವಸ್ಥೆ ಜಾರಿ ಆಗಲಿದೆ. ‘ಕಾಲಿಂಗ್ ನೇಮ್ ಪ್ರೆಸೆಂಟೇಶನ್’ ಹೆಸರಿನ ಈ ವ್ಯವಸ್ಥೆಯು ಒಳಬರುವ ಕರೆಗಳ ವಿಚಾರದಲ್ಲಿ ಪಾರದರ್ಶಕತೆಯನ್ನು ಹೆಚ್ಚು ಮಾಡುತ್ತದೆ. ಕರೆ ಮಾಡಿದವರ ಹೆಸರನ್ನು ತೋರಿಸುವ ಮೂಲಕ ಕರೆ ಸ್ವೀಕರಿಸಬೇಕೆ ಅಥವಾ ಬೇಡವೇ ಎನ್ನುವುದರ ಬಗ್ಗೆ ನಿರ್ಧಾರ ಕೈಗೊಳ್ಳಲು ಗ್ರಾಹಕರಿಗೆ ಅವಕಾಶ ಕಲ್ಪಿಸುತ್ತದೆ. ಇದರಿಂದ ಅನಾಮಿಕ ಕರೆಗಳಿಂದ ವಂಚನೆ ತಪ್ಪಿಸಲು ಸಹಕಾರಿಯಾಗುತ್ತದೆ.
ದೂರಸಂಪರ್ಕ ಇಲಾಖೆಯ ಈ ಕುರಿತಾದ ಪ್ರಸ್ತಾವನೆಗೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದೆ. ಕರೆ ಮಾಡಿದವರ ಮಾಹಿತಿಯನ್ನು ಟೆಲಿಕಾಂ ಕಂಪನಿಗಳೇ ಒದಗಿಸುತ್ತವೆ. ಸಿಮ್ ಕಾರ್ಡ್ ನೀಡಲು ದೃಢೀಕರಣ ಮಾಡಿದ ದಾಖಲೆಗಳಲ್ಲಿ ಇರುವ ಹೆಸರೇ ಕರೆ ಸ್ವೀಕರಿಸುವ ವ್ಯಕ್ತಿಯ ಮೊಬೈಲ್ ನಲ್ಲಿ ಗೋಚರವಾಗುತ್ತದೆ ಎನ್ನಲಾಗಿದೆ.
