ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಅತಿಥಿ ಶಿಕ್ಷಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ.
ಈ ಮೂಲಕ ಶಿಕ್ಷಕಿಯ ಮೇಲೆ ಹಲ್ಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಶಿಕ್ಷಕಿಯ ಮೇಲೆ ಹಲ್ಲೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಚಂದುಹಳ್ಳಿಯ ಭವಿತ್ ಬಂಧಿತ ಆರೋಪಿ. ಭವಿತ್ ಶಿಕ್ಷಕಿ ಜೊತೆ ಸಂಪರ್ಕದಲ್ಲಿದ್ದ. ಪ್ರೀತಿ ನಿರಾಕರಿಸಿದ್ದಕ್ಕೆ ತಲೆಗೆ ಹೊಡೆದು ಸೀರೆ ಬಿಚ್ಚಿ ಅದರಿಂದಲೇ ಮರಕ್ಕೆ ನೇಣು ಹಾಕಿ ಕೊಲೆಗೆ ಯತ್ನಿಸಿದ್ದಾನೆ.
ಶಾಲೆ ಮುಗಿಸಿ ಮನೆಗೆ ವಾಪಸ್ ಆಗುವಾಗ 25 ವರ್ಷದ ಶಿಕ್ಷಕಿ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರ ಕೂಗಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು, ಮನೆಯವರು ರಕ್ಷಣೆ ಮಾಡಿದ್ದಾರೆ. ಮಾರಣಾಂತಿಕ ಹಲ್ಲೆಗೊಳಗಾದ ಶಿಕ್ಷಕಿಗೆ ಕೊಪ್ಪ ಆಸ್ಪತ್ರೆಯಲ್ಲಿ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,. ಆರೋಪಿಗಳ ಬಂಧನಕ್ಕೆ 3 ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ.
