ಬೆಂಗಳೂರು: ನಗರದಲ್ಲಿ ವಕೀಲರಿಗೆ ಪ್ರತ್ಯೇಕ ವಸತಿ ಯೋಜನೆ ರೂಪಿಸಲಾಗುವುದು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಭರವಸೆ ನೀಡಿದ್ದಾರೆ.
ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಮತ್ತು ಹೆಚ್ಚುವರಿ ಅಡ್ವೋಕೇಟ್ ಜನರಲ್ ಇಸ್ಮಾಯಿಲ್ ಜಬೀವುಲ್ಲಾ ಅವರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಸಚಿವರು ಇಲಾಖೆ ಆಯುಕ್ತರೊಂದಿಗೆ ಚರ್ಚೆ ನಡೆಸಿ, ಗೃಹ ಮಂಡಳಿ ಅಥವಾ ರಾಜೀವ್ ಗಾಂಧಿ ವಸತಿ ನಿಗಮದಿಂದ ಬೆಂಗಳೂರಿನಲ್ಲಿ ವಕೀಲರಿಗೆ ಪ್ರತ್ಯೇಕ ವಸತಿ ಯೋಜನೆ ರೂಪಿಸಲಾಗುವುದು ಎಂದು ಹೇಳಿದ್ದಾರೆ.
ವಸತಿರಹಿತ ವಕೀಲರಿಗೆ ನಿವೇಶನ ಅಥವಾ ವಸತಿ ಸಂಕೀರ್ಣ ನಿರ್ಮಿಸಿಕೊಡಬೇಕೆಂಬ ಮನವಿಯನ್ನು ಪರಿಗಣಿಸಿ ವಸತಿ ಸಂಕೀರ್ಣ ನಿರ್ಮಾಣ ಮಾಡಲು ಸೂಕ್ತ ಜಮೀನು ಹುಡುಕುವಂತೆ ಗೃಹ ಮಂಡಳಿ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು. ರಾಜೀವ್ ಗಾಂಧಿ ವಸತಿ ನಿಗಮದಿಂದ ಬೆಂಗಳೂರಿನ ಹಲವೆಡೆ ಎರಡು ಬಿ.ಹೆಚ್.ಕೆ. ವಸತಿ ಸಂಕೀರ್ಣ ನಿರ್ಮಾಣ ಮಾಡಲಾಗಿದ್ದು, ವಕೀಲರು ಒಪ್ಪಿದರೆ ಅಲ್ಲಿಯೂ ಅವಕಾಶ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
