ನವದೆಹಲಿ: ಹಿಂಗಾರು ಹಂಗಾಮಿನ ಬೆಳೆಗಳಿಗೆ 37,952 ಕೋಟಿ ರೂಪಾಯಿ ಮೌಲ್ಯದ ರಸಗೊಬ್ಬರ ಸಬ್ಸಿಡಿಗೆ ಕೇಂದ್ರ ಸಚಿವ ಸಂಪುಟ ಸಭೆ ಮಂಗಳವಾರ ಅನುಮೋದನೆ ನೀಡಿದೆ.
ಹಿಂಗಾರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಯೂರಿಯಾಯೇತರ ರಸಗೊಬ್ಬರಗಳಾದ ರಂಜಕ ಮತ್ತು ಗಂಧಕಗಳ ಮೇಲಿನ ಸಹಾಯಧನ ಪ್ರಮಾಣವನ್ನು 14 ಸಾವಿರ ಕೋಟಿ ರೂ. ನಷ್ಟು ಹೆಚ್ಚಳ ಮಾಡಿದ್ದು, 37,952 ಕೋಟಿ ರೂ.ಗೆ ತಲುಪಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಮಾಹಿತಿ ನೀಡಿದ್ದು, ಒಂದು ಕೆಜಿ ರಂಜಕದ ಮೇಲೆ ಹಾಲಿ ನೀಡಲಾಗುತ್ತಿದ್ದ 43.50 ರೂ. ಸಹಾಯಧನವನ್ನು 47.96 ರೂ.ಗೆ ಹೆಚ್ಚಳ ಮಾಡಲಾಗಿದೆ. ಗಂಧಕದ ಸಹಾಯಧನವನ್ನು 1.77 ರೂ.ನಿಂದ 2.87 ರೂ.ಗೆ ಹೆಚ್ಚಳ ಮಾಡಲಾಗಿದೆ. ಈ ವರ್ಷದ ಸಹಾಯಧನದ ಮೊತ್ತವನ್ನು 14 ಸಾವಿರ ಕೋಟಿ ರೂಪಾಯಿ ಹೆಚ್ಚಳ ಮಾಡಿದ್ದು, 37,952 ಕೋಟಿಗೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಕ್ಟೋಬರ್ 1ರಿಂದ ಸಬ್ಸಿಡಿ ದರಗಳು ಅನ್ವಯವಾಗಲಿದೆ.
