ಬೆಂಗಳೂರು: ಸುರಂಗ ರಸ್ತೆ ಯೋಜನೆಗೂ ನಿಮ್ಮ ಸಿಎಂ ಹುದ್ದೆ ಕನಸಿಗೂ ಏನಾದರೂ ಸಂಬಂಧವಿದೆಯೇ? ಎಂದು ವಿಪಕ್ಷ ನಾಯಕ ಆರ್.ಅಶೋಕ್, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಸಾಕಷ್ಟು ಬಾಧಕಗಳಿರುವ ಸುರಂಗ ರಸ್ತೆಯನ್ನು ಮಾಡಿಯೇ ಮಾಡುತ್ತೇನೆ ಎಂದು ಹಠಕ್ಕೆ ಯಾಕೆ ಬಿದ್ದಿದ್ದೀರಿ? ಐಐಎಸ್ ಸಿ ಅಧ್ಯಯನ ವರದಿ, ವಿಜ್ಞಾನಿಗಳು, ಪರಿಸರ ತಜ್ಞರು, ಪರಿಸರವಾದಿಗಳು, ನಾಗರಿಕರು ಎಷ್ಟೇ ವಿರೋಧ ಮಾಡುತ್ತಿದ್ದರೂ ಸುರಂಗ ರಸ್ತೆ ಬಗ್ಗೆ ನಿಮಗೆ ಅಷ್ಟು ಅಚಲ ಆಸಕ್ತಿ ಯಾಕೆ? ಎಂದು ಕೇಳಿದ್ದಾರೆ.
ಸುರಂಗ ರಸ್ತೆ ಬಗ್ಗೆ ರಾಹುಲ್ ಗಾಂಧಿ ಹಾಗೂ ಹೈಕಮಾಂಡ್ ನ ಕಮಿಷನ್ ಪಾಲೆಷ್ಟು? ಇದಕ್ಕೂ ನಿಮ್ಮ ಸಿಎಂ ಹುದ್ದೆ ಕನಸಿಗೂ ಸಂಬಂಧವಿದೆಯೇ? ಉತ್ತರ ಕೊಡಿ. ನಿಮ್ಮ ವೈಯಕ್ತಿಕ ಪ್ರತಿಷ್ಠೆ, ಹಠಕ್ಕೆ ಬೆಂಗಳೂರಿನ ಪರಿಸರಕ್ಕೆ ದೀರ್ಘಕಾಲೀನ ಅಪಾಯ ತಂದೊಡ್ದುವ ಅವೈಜ್ಞಾನಿಕ ಯೋಜನೆಯನ್ನು ಹೇರಿ ಬೆಂಗಳೂರಿನ ವಿಲನ್ ಆಗಬೇಡಿ ಎಂದು ಕಿಡಿಕಾರಿದ್ದಾರೆ.
