ನವದೆಹಲಿ : ದೆಹಲಿ ಪೊಲೀಸರು ಈ ತಿಂಗಳ ಆರಂಭದಲ್ಲಿ ಗಾಂಧಿ ವಿಹಾರ್ನ ಅಪಾರ್ಟ್ಮೆಂಟ್ನಲ್ಲಿ ಸುಟ್ಟುಹೋದ 32 ವರ್ಷದ ಯುಪಿಎಸ್ಸಿ ಆಕಾಂಕ್ಷಿಯ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ. ಈ ಪ್ರಕರಣವು ಮೊದಲು ಬೆಂಕಿ ಆಕಸ್ಮಿಕವೆಂದು ಕಂಡುಬಂದರೂ, ನಂತರ ಕೊಲೆ ಎಂದು ಸಾಬೀತಾಗಿದೆ.
ರಾಮಕೇಶ್ ಮೀನಾ ಎಂದು ಗುರುತಿಸಲ್ಪಟ್ಟ ಬಲಿಪಶುವನ್ನು ಅವರ ಲಿವ್-ಇನ್ ಗೆಳತಿ ಮತ್ತು ಇತರ ಇಬ್ಬರು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ, ನಂತರ ಅವರು ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಅವರ ಫ್ಲಾಟ್ಗೆ ಬೆಂಕಿ ಹಚ್ಚಿದರು.
ಆರಂಭದಲ್ಲಿ ಎಸಿ ಸ್ಫೋಟ ಎಂದು ಹೇಳಲಾಗಿತ್ತು. ಆದರೆ ಪೊಲೀಸರು ತನಿಖೆ ನಡೆಸಿದಾಗ ಇದು ಕೊಲೆ ಎಂದು ಬಯಲಾಗಿದೆ. ಮೀನಾ ಅವರ ಶವ ಪತ್ತೆಯಾದ ಕೆಲವು ದಿನಗಳ ನಂತರ, ಪೊಲೀಸರು ಮೂವರನ್ನು ಬಂಧಿಸಿದರು.
21 ವರ್ಷದ ಪ್ರೇಯಸಿ ಅಮೃತಾ ಚೌಹಾಣ್, ಅವರ ಮಾಜಿ ಗೆಳೆಯ ಸುಮಿತ್ ಕಶ್ಯಪ್ (27) ಮತ್ತು ಅವರ ಸ್ನೇಹಿತ ಸಂದೀಪ್ ಕುಮಾರ್ (29), ಎಲ್ಲರೂ ಉತ್ತರ ಪ್ರದೇಶದ ಮೊರಾದಾಬಾದ್ ನಿವಾಸಿಗಳು.
ಕೊಲೆಗೆ ಕಾರಣ ಏನು..?
ಅಮೃತಾ ಮೇ ತಿಂಗಳಿನಿಂದ ರಾಮಕೇಶ್ ಮೀನಾ ಜೊತೆ (ಲಿವ್ ಇನ್ ಸಂಬಂಧ ) ವಾಸಿಸುತ್ತಿದ್ದರು. ಆದರೆ ಮೀನಾ ತನ್ನ ಖಾಸಗಿ ವೀಡಿಯೊಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾನೆ ಮತ್ತು ಅವಳು ಪದೇ ಪದೇ ಮನವಿ ಮಾಡಿದರೂ ಅವುಗಳನ್ನು ಡಿಲೀಡ್ ಮಾಡಲು ನಿರಾಕರಿಸಿದ್ದಾನೆ ಎನ್ನಲಾಗಿದೆ. ಇದರಿಂದ ಅವರಿಬ್ಬರ ಸಂಬಂಧ ಹದಗೆಟ್ಟಿದ್ದು ಕೋಪಗೊಂಡ ಮತ್ತು ಅವಮಾನಕ್ಕೊಳಗಾದ ಅಮೃತಾ ತನ್ನ ಮಾಜಿ ಗೆಳೆಯ ಸುಮಿತ್ಗೆ ಈ ವಿಷಯ ಬಹಿರಂಗಪಡಿಸಿದಳು, ಅವನು “ಅವನಿಗೆ ಪಾಠ ಕಲಿಸಲು” ಸಹಾಯ ಮಾಡಲು ನಿರ್ಧರಿಸಿದನು, ಜೊತೆಗೆ ಅವನ ಸ್ನೇಹಿತ ಸಂದೀಪ್ ನನ್ನು ಈ ಕೃತ್ಯಕ್ಕೆ ಬಳಸಿಕೊಂಡನು
. ಡಿಸಿಪಿ (ಉತ್ತರ) ರಾಜಾ ಬಂಥಿಯಾ ಪ್ರಕಾರ, ಮೂವರು ಅಕ್ಟೋಬರ್ 5–6ರ ರಾತ್ರಿ ಮೊರಾದಾಬಾದ್ನಿಂದ ದೆಹಲಿಗೆ ಪ್ರಯಾಣ ಬೆಳೆಸಿದರು ಮತ್ತು ಗಾಂಧಿ ವಿಹಾರ್ನಲ್ಲಿರುವ ಮೀನಾ ಅವರ ನಾಲ್ಕನೇ ಮಹಡಿಯ ಫ್ಲಾಟ್ಗೆ ಪ್ರವೇಶಿಸಿದರು.
ಮುಸುಕುಧಾರಿ ಇಬ್ಬರು ಪುರುಷರು ಕಟ್ಟಡದೊಳಗೆ ಪ್ರವೇಶಿಸುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದ್ದು, ನಂತರ ಒಬ್ಬ ಮಹಿಳೆ ಬಂದಿದ್ದಾರೆ. ಬೆಳಗಿನ ಜಾವ 2:57 ರ ಸುಮಾರಿಗೆ, ಅಮೃತ ಎಂದು ಗುರುತಿಸಲ್ಪಟ್ಟ ಮಹಿಳೆ ಮತ್ತು ಒಬ್ಬ ಪುರುಷ ಹೊರಟು ಹೋಗುತ್ತಿರುವುದು ಕಂಡುಬಂದಿದೆ. ಕೆಲವೇ ಕ್ಷಣಗಳ ನಂತರ, ಅಪಾರ್ಟ್ಮೆಂಟ್ನಲ್ಲಿ ಸ್ಫೋಟ ಸಂಭವಿಸಿದೆ. “ಘಟನೆಯ ರಾತ್ರಿ ಮುಖ ಮುಚ್ಚಿಕೊಂಡಿದ್ದ ಇಬ್ಬರು ವ್ಯಕ್ತಿಗಳು ಕಟ್ಟಡದೊಳಗೆ ಪ್ರವೇಶಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಮತ್ತು ಇಬ್ಬರೂ ಹೊರಗೆ ಹೋದ ಸ್ವಲ್ಪ ಸಮಯದ ನಂತರ ಬೆಂಕಿ ಕಾಣಿಸಿಕೊಂಡಿದ್ದು, ಇದು ಅನುಮಾನಕ್ಕೆ ಕಾರಣವಾಯಿತು. ವಿಧಿವಿಜ್ಞಾನ ಸಂಶೋಧನೆಗಳ ಆಧಾರದ ಮೇಲೆ, ಇದು ಕೊಲೆ ಎಂದು ಸ್ಪಷ್ಟವಾಯಿತು” ಎಂದು ಡಿಸಿಪಿ ಬಂಥಿಯಾ ಹೇಳಿದರು.
ಫ್ಲಾಟ್ ಒಳಗೆ ಮೀನಾ ಅವರ ತೀವ್ರವಾಗಿ ಸುಟ್ಟ ದೇಹ ಪತ್ತೆಯಾಗಿದೆ. ಮೊದಲಿಗೆ, ತನಿಖಾಧಿಕಾರಿಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಎಸಿ ಸ್ಫೋಟದ ಶಂಕೆಯನ್ನು ವ್ಯಕ್ತಪಡಿಸಿದ್ದರು, ಆದರೆ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ವಿಚಾರಣೆ ನಡೆಸಿದಾಗ ಮೂವರು ಮೀನಾ ಅವರನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಕೊಲೆ, ಪಿತೂರಿ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂವರು ಆರೋಪಿಗಳು ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
