ಅಥಣಿ: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೆಂಬಲಿತ ತಂಡಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಎಲ್ಲಾ 12 ಕ್ಷೇತ್ರಗಳಲ್ಲಿ ಸವದಿ ಬೆಂಬಲಿಗರು ಜಯಗಳಿಸಿದ್ದು, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಿಗರಿಗೆ ಭಾರಿ ಹಿನ್ನಡೆಯಾಗಿದೆ.
ಇತ್ತೀಚೆಗಷ್ಟೇ ನಡೆದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಕ್ಷೇತ್ರದ ಮೇಲಿನ ಪ್ರಾಬಲ್ಯ ಸಾಧಿಸಿದ್ದ ಲಕ್ಷ್ಮಣ ಸವದಿ ಅಥಣಿಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿಯೂ ಪ್ರಾಬಲ್ಯ ಸಾಧಿಸಿದ್ದು, ಅವರ ಬೆಂಬಲಿಗರು ಕ್ಲೀನ್ ಸ್ವೀಪ್ ಮಾಡಿದ್ದಾರೆ.
ಅಥಣಿ ಶಾಸಕ ಲಕ್ಷ್ಮಣ ಸವದಿ ಮತ್ತು ಕಾಗವಾಡ ಶಾಸಕ ರಾಜು ಕಾಗೆ ನೇತೃತ್ವದ ರೈತರ ಸಹಕಾರಿ ಪ್ಯಾನಲ್ ನ ಒಟ್ಟು 13 ಸ್ಥಾನಗಳ ಪೈಕಿ ಬ ವರ್ಗದ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಿಕೊಂಡಿದ್ದು, ಉಳಿದ 12 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸವದಿ ಬೆಂಬಲಿತ ಪ್ಯಾನಲ್ ನ ಎಲ್ಲಾ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ನಾಲ್ಕನೇ ಅವಧಿಗೆ ನಿಕಟ ಪೂರ್ವ ಅಧ್ಯಕ್ಷ ಪರಪ್ಪ ಸವದಿ ನೇತೃತ್ವದ ಆಡಳಿತ ಮಂಡಳಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.
ರಮೇಶ ಜಾರಕಿಹೊಳಿ ಬೆಂಬಲದಿಂದ ಮಾಜಿ ಶಾಸಕರಾದ ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ, ಶಹಜಹಾನ್ ಡೊಂಗರಗಾವ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸುಳಿ ನೇತೃತ್ವದ ಸ್ವಾಭಿಮಾನಿ ರೈತ ಪ್ಯಾನಲ್ ರಚಿಸಿ ಸವದಿ ಅವರ ವಿರುದ್ಧ ಕಾರ್ಯತಂತ್ರ ರೂಪಿಸಲಾಗಿತ್ತು. ಆದರೆ ಎಲ್ಲಾ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.
