ಚಾಮರಾಜನಗರ: ಸ್ವಂತ ಮಗನೇ ತಂದೆಯನ್ನು ಕಾವೇರಿ ನದಿಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಗೋಪಿನಾಥಂ ಬಳಿಯ ಆತೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಂಕರನ್ (70) ಮಗನಿಂದಲೇ ಕೊಲೆಯಾದ ವ್ಯಕ್ತಿ. ಗೋವಿಂದರಾಜನ್ ತಂದೆಯನ್ನೇ ಕೊಲೆಗೈದ ಮಗ. ಎರಡು ದಿನಗಳಿಂದ ಶಂಕರನ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ನಿನ್ನೆ ಕಾವೇರಿ ನದಿಯಲ್ಲಿ ಶಂಕರನ್ ಶವ ಪತ್ತೆಯಾಗಿದೆ.
ಶಂಕರನ್ ಪತ್ನಿ ಪಳನಿಯಮ್ಮ, ಮಗ ಗೋವಿಂದರಾಜ್ ನೇ ತಂದೆಯನ್ನು ಆಯುಧದಿಂದ ಹೊಡೆದು ನದಿಗೆ ತಳ್ಳಿದ್ದಾನೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗೋವಿಂದರಾಜನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಶಂಕರನ್ ಹಾಗೂ ಗೋವಿಂದರಾಜನ್ ಮೇಕೆಗಳನ್ನು ಸಾಕುತ್ತಿದ್ದರು. ಮೇಕೆ ಭಾಗಮಾಡುವ ವಿಚಾರವಾಗಿ ತಂದೆ-ಮಗನ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.
