ಬುಲ್ಡಾನಾ: ಪತಿ-ಪತ್ನಿ ನಡುವಿನ ಜಗಳ ಅವಳಿ ಮಕ್ಕಳ ಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾರಾಷ್ಟ್ರದ ಬುಲ್ಡಾನಾದಲ್ಲಿ ನಡೆದಿದೆ.
ಪತ್ನಿ ಜಗಳ ಮಾಡಿಕೊಂಡು ತವರಿಗೆ ಹೋದಳೆಂದು ಕೋಪದ ಭರದಲ್ಲಿ ಪತಿ ಮಹಾಶಯ ತನ್ನ ಅವಳಿ ಮಕ್ಕಳನ್ನು ಕತ್ತು ಸೀಳಿ ಕೊಲೆಗೈದಿದ್ದಾನೆ. ಅವಳಿ ಹೆಣ್ಣಮಕ್ಕಳನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಈ ಕೃತ್ಯವೆಸಗಿದ್ದಾನೆ.
ಬಳಿಕ ಪೊಲೀಸ್ ಠಾಣೆಗೆ ಬಂದು ತಾನು ಮಕ್ಕಳನ್ನು ಕೊಂದಿರುವುದಾಗಿ ಸೀಳಿ ಶರಣಾಗಿದ್ದಾನೆ. ವಾಶಿಮ್ ಜಿಲ್ಲೆಯ ರಾಹುಲ್ ಚವ್ಹಾಣ್ ಮಕ್ಕಳನ್ನೆ ಕೊಲೆಗೈದ ಆರೋಪಿ. ಪತಿ-ಪತ್ನಿ ಇಬ್ಬರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದಾಗ ಪತ್ನಿಜೊತೆ ಜಗಳವಾಡಿದ್ದ. ಗಲಾಟೆಯಲ್ಲಿ ಪತ್ನಿ ತಾನು ತನ್ನ ತವರಿಗೆ ಹೋಗುವುದಾಗಿ ಹೇಳಿ ಹೊರಟಿದ್ದಾಳೆ. ಈ ವೇಳೆ ರಾಹುಲ್ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಯಾಣ ಮುಂದುವರೆಸಿದ್ದಾನೆ.
ಬಳಿಕ ಬುಲ್ಡಾನಾ ಜಿಲ್ಲೆಯ ಅಂಚಾರ್ವಾಡಿಯಲ್ಲಿರುವ ಅರಣ್ಯ ಪ್ರದೇಶಕ್ಕೆ ಮಕ್ಕಳನ್ನು ಕರೆದೊಯ್ದು ಕತ್ತು ಸೀಳಿ ಹತ್ಯೆಗೈದಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಆರೋಪಿ ಹೇಳಿಕೆ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ನೋಡುವಷ್ಟರಲ್ಲಿ ಶವಗಳು ಭಾಗಶಃ ಸುಟ್ಟು ಹೋಗಿದ್ದವು. ಮಕ್ಕಳನ್ನು ಕೊಲೆಗೈದ ಬಳಿಕ ರಾಹುಲ್ ಸಾಕ್ಷಿನಾಶಕ್ಕಾಗಿ ಶವಗಳನ್ನು ಸುಟ್ಟು ಹಾಕಲು ಯತ್ನಿಸಿರಬಹುದು ಎಂದು ಶಂಕಿಸಲಾಗಿದೆ. ಆರೋಪಿ ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
