ಬೆಂಗಳೂರು: ಬೆಂಗಳೂರು -ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ನೆಲಮಂಗಲ ತಾಲೂಕಿನ ಟಿ. ಬೇಗೂರು ಸಮೀಪ ಕಾರ್, ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ಗದಗ ಜಿಲ್ಲೆ ರೋಣದಿಂದ ಬೆಂಗಳೂರಿಗೆ ತೆರಳುತ್ತಿದ್ದ ಮಾರುತಿ ಎರ್ಟಿಗಾ ಕಾರ್ ಮುಂದೆ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಹಿಂಬದಿಯಿಂದ ಲಾರಿಗೆ ಕಾರ್ ಡಿಕ್ಕಿ ಹೊಡೆದಿದ್ದು, ಕಾರ್ ನಲ್ಲಿದ್ದ ಐದು ಜನರ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದಾರೆ.
ಶಿವಲಿಂಗಗೌಡ, ಪ್ರಮೀಳಾ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕುಟುಂಬದವರು ಕಾರ್ ನಲ್ಲಿ ಬೆಂಗಳೂರಿನ ನಾರಾಯಣ ಆಸ್ಪತ್ರೆಗೆ ಬರುವಾಗ ಅಪಘಾತ ಸಂಭವಿಸಿದೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
